ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮತ್ತು ಕೊರೋನಾ ಭಯದಿಂದ ಪರೀಕ್ಷೆ ಬರೆಯದೇ ಮನೆಯಲ್ಲೇ ಉಳಿಕೊಂಡ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಚಾಮರಾಜನಗರ, (ಆ.08) : ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ರಾಜ್ಯದ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ, ಆಗಸ್ಟ್ 10ರಂದು ಪ್ರಕಟಗೊಳ್ಳಲಿದೆ.
ಆಗಸ್ಟ್ 10ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂತ ಪ್ರಕಟಗೊಳ್ಳಲಿದೆ. ಈ ಬಾರಿ ವಿದ್ಯಾರ್ಥಿಗಳ ಮೊಬೈಲ್ಗೆ ಎಸ್.ಎಂ.ಎಸ್. ಮೂಲಕ ಫಲಿತಾಂಶ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು (ಶನಿವಾರ) ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪು ಗೂಡಬಾರದು ಎಂಬ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಮೊಬೈಲ್ ಗೆ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
SSLC ಫಲಿತಾಂಶ: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ಆಗಸ್ಟ್ 10ರಂದು ಮಧ್ಯಾಹ್ನ 3ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. ಅಂದು karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕವೂ ಪರೀಕ್ಷೆಯ ಫಲಿತಾಂಶ ದೊರೆಯಲಿದೆ ಎಂದು ಹೇಳಿದರು.
ಈ ಬಾರಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಒಳ್ಳೆಯ ಫಲಿತಾಂಶವೂ ಬರಬೇಕೆಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಅನುತ್ತೀರ್ಣರಾದವರು ಯಾರು ಸಹ ನಿರಾಶರಾಗುವುದು ಬೇಡ. ಜೀವನದಲ್ಲಿ ಇದೇ ಕೊನೇ ಅಲ್ಲ. ಇದೂ ಒಂದು ಭಾಗ ಅಷ್ಟೆ ಎಂದರು.
ಸೆಪ್ಟೆಂಬರ್ನಲ್ಲಿ ಪೂರಕ ಪರೀಕ್ಷೆ
ಸೆಪ್ಟೆಂಬರ್ನಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಜೂನ್, ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಕೊರೋನಾ ಕಾರಣದಿಂದು ಸುಮಾರು 16 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಇವರೆಲ್ಲರನ್ನು ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಸ್ಟೂಡೆಂಟ್ ಎಂದು ಪರಿಗಣಿಸಲಾಗುವುದು. ಅಂಕಪಟ್ಟಿಯಲ್ಲೂ ಸಹ ಅಟೆಂಪ್ಟ್ ಎಂದು ನಮೂದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.