ಡಿಗ್ರಿ, ಪೀಜಿಗೆ ಇನ್ಮುಂದೆ ಮುದ್ರಿತ ಅಂಕಪಟ್ಟಿ ಇಲ್ಲ!

By Web DeskFirst Published Jun 4, 2019, 8:52 AM IST
Highlights

ಡಿಗ್ರಿ, ಪೀಜಿಗೆ ಇನ್ಮುಂದೆ ಮುದ್ರಿತ ಅಂಕಪಟ್ಟಿಇಲ್ಲ | ಡಿಜಿಟಲ್‌ ಮಾರ್ಕ್ಸ್‌ಕಾರ್ಡ್‌ ಮಾತ್ರ ನೀಡಲು ಶಿಕ್ಷಣ ಇಲಾಖೆ ನಿರ್ಧಾರ |  ಡಿಪ್ಲೊಮಾ ಕೋರ್ಸ್‌ಗಳಿಗೂ ಮುದ್ರಿತ ಅಂಕಪಟ್ಟಿ ನೀಡೋದಿಲ್ಲ: ಜಿಟಿಡಿ

ಬೆಂಗಳೂರು (ಜೂ. 04): ರಾಜ್ಯದಲ್ಲಿ ವ್ಯಾಸಂಗ ಮಾಡುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮುದ್ರಿತ ಅಂಕಪಟ್ಟಿದೊರೆಯುವುದಿಲ್ಲ. ಏಕೆಂದರೆ, ರಾಜ್ಯದಲ್ಲಿ ಅಂಕಪಟ್ಟಿಗಳನ್ನು ಡಿಜಿಟಲೀಕರಣಗೊಳಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಅಷ್ಟೇ ಅಲ್ಲ, ಇನ್ನು ಅಂಕಪಟ್ಟಿಗಳು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲೂ ಲಭ್ಯವಾಗಲಿವೆ. ಇದುವರೆಗೆ ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಅಂಕಪಟ್ಟಿಒದಗಿಸಲಾಗುತ್ತಿತ್ತು. ಅಂಕಪಟ್ಟಿಡಿಜಿಟಲೀಕರಣದ ಜತೆಗೆ, ಭವಿಷ್ಯದಲ್ಲಿ ಕ್ರಮೇಣ ಪ್ರವೇಶ, ಪರೀಕ್ಷಾ ಶುಲ್ಕ ಪಾವತಿ, ಅಂಕಪಟ್ಟಿಪಡೆಯುವ ವಿಧಾನವನ್ನು ಡಿಜಿಟಲೀಕರಣಗೊಳಿಸಲು ಇಲಾಖೆ ಉದ್ದೇಶಿಸಿದೆ.

ನಗರದ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವವಿದ್ಯಾಲಯಗಳು ಕುಲಪತಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ನಂತರ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಕಲಿ ಅಂಕಪಟ್ಟಿಗಳ ಹಾವಳಿ, ಅಕ್ರಮ ತಡೆಗಟ್ಟಲು ಅಂಕಪಟ್ಟಿಗಳನ್ನು ಡಿಜಿಟಲೀಕರಣಗೊಳಿಸಲು ತೀರ್ಮಾನಿಸಲಾಗಿದೆ.

ವಿದ್ಯಾರ್ಥಿಗಳು ಇನ್ನುಮುಂದೆ ವಿದ್ಯಾರ್ಥಿಗಳು ಆಯಾ ಕಾಲೇಜು ಹಾಗೂ ವಿವಿಗಳ ವೆಬ್‌ಸೈಟ್‌ ಮೂಲಕ ಡಿಜಿಟಲೀಕೃತ ಅಂಕಪಟ್ಟಿಪಡೆದುಕೊಳ್ಳಬಹುದು. ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಪಾಸ್‌ವರ್ಡ್‌ ನೀಡಲಾಗುವುದು. ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರು ಹಾಗೂ ಪಾಸ್‌ವರ್ಡ್‌ ಬಳಸಿ ಅಂಕಪಟ್ಟಿಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವೇಳೆ ಹಾಗೂ ವಿದೇಶಿದಲ್ಲಿ ವ್ಯಾಸಂಗ ಮಾಡಲು ಅಂಕಪಟ್ಟಿಗಳನ್ನು ದೃಢೀಕರಿಸುವ ಅಲೆದಾಟ ತಪ್ಪುತ್ತದೆ. ಈ ಡಿಜಿಟಲೀಕೃತ ಅಂಕಪಟ್ಟಿಯನ್ನು ನಕಲು ಮಾಡಲಾಗದಂತೆ ಅಗತ್ಯವಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತನ್ಮೂಲಕ ಮುದ್ರಿತ ಅಂಕಪಟ್ಟಿಯ ಅಕ್ರಮಗಳನ್ನು ಈ ವ್ಯವಸ್ಥೆಯಿಂದ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಅಂಕಪಟ್ಟಿಯನ್ನು ಡಿಜಿಟಲೀಕರಣ ಮಾಡಲು ಬೆಳಗಾವಿಯ ಸರ್‌ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ತರಬೇತಿ, ಸಾಫ್ಟ್‌ವೇರ್‌ ತಯಾರಿಕೆ ಮತ್ತು ಸಾಫ್ಟ್‌ವೇರ್‌ ಉನ್ನತೀಕರಿಸುವ ಹೊಣೆ ನೀಡಲಾಗಿದೆ.

ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಪರಿಶೀಲನೆ, ನಿರ್ವಹಣೆಯನ್ನು ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿ (ನ್ಯಾಡ್‌)ಗೆ ವಹಿಸಲಾಗುತ್ತದೆ. ಮುಂಬರುವ ಡಿಸೆಂಬರ್‌ನಿಂದಲೇ ಹೊಸ ನೀತಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಡಿಜಿಟಲೀಕೃತ ಅಂಕಪಟ್ಟಿಹಾಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, 1990ರ ನಂತರ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೂ ದೊರೆಯಲಿದೆ. ಈ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದರು.

ವಿವಿಗಳಲ್ಲಿ ಯೋಗ, ಧ್ಯಾನ:

ಅದೇ ರೀತಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಯೋಗ ಮತ್ತು ಧ್ಯಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಮತ್ತು ತರಗತಿಗಳನ್ನು ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. 2019-20ನೇ ಸಾಲಿನಿಂದಲೇ ಪ್ರತಿ ಕಾಲೇಜುಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ನ್ಯಾಕ್‌ ಮಾದರಿ ಸಮಿತಿ:

ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತೆ ಸಂಸ್ಥೆ (ನ್ಯಾಕ್‌) ಮಾದರಿಯಲ್ಲಿ ರಾಜ್ಯದಲ್ಲಿಯೂ ಕಾಲೇಜುಗಳ ಸ್ಥಿತಿಗತಿ ಅರಿಯಲು ರಾಜ್ಯಮಟ್ಟದ ಸಮಿತಿ ರಚಿಸಲಾಗುತ್ತಿದೆ. ನ್ಯಾಕ್‌ ತಂಡವು ವರ್ಷದಲ್ಲಿ ಒಂದು ಬಾರಿ ಮಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಆದರೆ, ರಾಜ್ಯಮಟ್ಟದ ಸಮಿತಿಯು ವರ್ಷದಲ್ಲಿ ಹಲವು ಬಾರಿ ಭೇಟಿ ನೀಡಿ ನಿರಂತರವಾಗಿ ಪರಿಶೀಲನೆ ನಡೆಸಲಿದೆ. ಇದರಿಂದ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ನ್ಯಾಕ್‌ ಸಮಿತಿ ವತಿಯಿಂದ ರಾರ‍ಯಂಕ್‌ ಪಡೆಯಲು ಸಹ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮಿತಿ:

ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಸರಿಸುತ್ತಿರುವ ವಿವಿಧ ರೀತಿಯ ಮಾನದಂಡಗಳಲ್ಲಿ ಏಕರೂಪತೆ ತರಲು ಮೂವರು ಕುಲಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಒಂದೇ ಮಾದರಿಯ ನಿಯಮ ಅನುಷ್ಠಾನ ಮಾಡಿಕೊಳ್ಳುವುದಕ್ಕಾಗಿ ನಿಯಮ ರೂಪಿಸಲಾಗುತ್ತಿದೆ.

ಅಲ್ಲದೆ, ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ಅತಿಥಿ ಉಪನ್ಯಾಸಕರಿಗೆ 50 ಸಾವಿರ ರು. ವೇತನ ನೀಡಬೇಕೆಂದು ನಿಯಮವನ್ನು ಪರಿಶೀಲಿಸಲಾಗುತ್ತದೆ. ಅತಿಥಿ ಉಪನ್ಯಾಸಕರಿಗೆ 50 ಸಾವಿರ ರು. ವೇತನ ನೀಡಿದರೆ ರಾಜ್ಯ ಸರ್ಕಾರಕ್ಕೆ ಕಷ್ಟವಾಗಲಿದೆ. ಆದ್ದರಿಂದ ರಾಜ್ಯಕ್ಕೆ ತನ್ನದೇ ಆದ ನಿಯಮದ ಅವಶ್ಯವಿರುವುದರಿಂದ ಸಮಿತಿ ರಚನೆ ಮಾಡಲಾಗುತ್ತಿದೆ.

ಕಾಲೇಜಿಗೆ ಮಾನ್ಯತೆ ನೀಡಲು ಸಮಿತಿ:

ಸರ್ಕಾರದ ಮಾನ್ಯತೆ ಇಲ್ಲದೆಯೇ ರಾಜ್ಯದಲ್ಲಿ ಸುಮಾರು ಕಾಲೇಜುಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಂತಹ ಕಾಲೇಜುಗಳನ್ನು ಗುರುತಿಸಿ ಸ್ಥಿತಿಗತಿಗಳನ್ನು ಅರಿಯಲು ಸಹ ಸಮಿತಿ ರಚನೆ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ವಿಶ್ವವಿದ್ಯಾಲಯದ ಕುಲಪತಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗುತ್ತದೆ.

ಈಗಾಗಲೇ ಪದವಿ ಪಡೆದಿರುವ ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎಂಬುದನ್ನು ಸಹ ನಿರ್ಧರಿಸಲಾಗುತ್ತದೆ. ಪದವಿ ಕಾಲೇಜಿನ 310 ಪ್ರಾಂಶುಪಾಲರು ಹಾಗೂ 3,800 ಪ್ರಾಧ್ಯಾಪಕರ ನೇಮಕಾತಿಗೆ ರಾಜ್ಯ ಸರ್ಕಾರ ಮತ್ತು ಹಣಕಾಸು ಇಲಾಖೆ ಅನುಮತಿ ನೀಡಿದೆ. ಸದ್ಯದಲ್ಲಿಯೇ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣ ನೀತಿಗೆ ವಿವಿಗಳಿಂದ ವರದಿ

ದೇಶದಲ್ಲಿ ಉನ್ನತ ಶಿಕ್ಷಣ ಯಾವ ರೀತಿಯಲ್ಲಿರಬೇಕು ಎಂಬುದನ್ನು ತಿಳಿಯುವುದಕ್ಕಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜೂ.15ರೊಳಗೆ ಎಲ್ಲಾ ವಿಶ್ವವಿದ್ಯಾಲಗಳು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ನಂತರ ರಾಜ್ಯಮಟ್ಟದ ತಜ್ಞರ ಸಮಿತಿ ಪರಿಶೀಲಿಸಿ ಜೂ.30ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಹ ನಿರ್ಧರಿಸಲಾಗಿದೆ. ಜ್ಞಾನ ಆಯೋಗ ಮತ್ತು ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ವರದಿ ಸಲ್ಲಿಕೆಯಾಗಿವೆ. ಅದರಂತೆ ರಾಜ್ಯ ಸರ್ಕಾರದ ವತಿಯಿಂದ ವಿವಿಗಳು ನೀಡಿದ ವರದಿಯನ್ನು ತಜ್ಞರ ಸಮಿತಿ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.

ವಿವಿಗಳಲ್ಲಿ ಪೀಜಿ ಪ್ರವೇಶಕ್ಕೆ ಮುಕ್ತ ಅವಕಾಶ

ಇನ್ನು ಮುಂದೆ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬೇರೊಂದು ವಿವಿಗಳಲ್ಲಿ ಮುಕ್ತವಾಗಿ ಮೆರಿಟ್‌ ಆಧಾರದಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿಯವರೆಗೂ ಪದವಿ ಪಡೆದ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಬೇರೊಂದು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕೇವಲ ಎರಡು ಸೀಟುಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ನಿಯಮವನ್ನು ರದ್ದುಗೊಳಿಸಿ ಹೊಸ ನಿಯಮ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಯಾವುದೇ ಪ್ರತಿಮೆಗೆ ಅವಕಾಶವಿಲ್ಲ

ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರತಿಮೆಗಳನ್ನು ನಿರ್ಮಿಸುವುದನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೂಡ ಈ ಮೊದಲಿದ್ದ ಸರಸ್ವತಿ ಪ್ರತಿಮೆ ಹೊರತುಪಡಿಸಿ ಬೇರೆ ಯಾವ ವಿಗ್ರಹವನ್ನು ಪ್ರತಿಷ್ಠಾಪಿಸದಂತೆ ಸೂಚನೆ ನೀಡಲಾಗಿದೆ.

click me!