ಖಾಸಗಿ ವೈದ್ಯ ಕಾಲೇಜುಗಳಲ್ಲಿ ಕನ್ನಡಿಗರಿಗೆ ಶೇ. 50 ಸೀಟು?

By Web DeskFirst Published Jun 20, 2019, 11:23 AM IST
Highlights

ಖಾಸಗಿ ವೈದ್ಯ ಕಾಲೇಜುಗಳಲ್ಲಿ ಕನ್ನಡಿಗರಿಗೆ ಶೇ. 50 ಸೀಟು?| ತಮಿಳುನಾಡು ಮಾದರಿ ವ್ಯವಸ್ಥೆಗೆ ಸರ್ಕಾರ ಒಲವು | ಇಂದು ಸಭೆ

ಬೆಂಗಳೂರು[ಜೂ.20]: ಕೇಂದ್ರ ಸರ್ಕಾರ ಜಾರಿಗೆ ತಂದ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸುಗಳ ಪ್ರವೇಶ ಗಗನ ಕುಸುಮವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಸೀಟು ಮೀಸಲಿಡುವಂತೆ ಕೋರಲು ರಾಜ್ಯ ಸರ್ಕಾರ ಗುರುವಾರ ಮಹತ್ವದ ಸಭೆ ಕರೆದಿದೆ.

ವಿಕಾಸಸೌಧದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಅವರು ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು, ಸ್ವಾಯತ್ತ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಯ ಪ್ರಮುಖರು, ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳೊಂದಿಗೆ ಮಾತು ಕತೆ ನಡೆಸಲಿದ್ದಾರೆ. ಇದೇ ವೇಳೆ ವೈದ್ಯಕೀಯ ಸೀಟುಗಳ ಪ್ರವೇಶ ಶುಲ್ಕ ನಿಗದಿ ಬಗ್ಗೆಯೂ ಚರ್ಚೆ ನಡೆಯಲಿದೆ

ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಶೇ. ರಷ್ಟು ವೈದ್ಯಕೀಯ ಕೋರ್ಸು ಆಕಾಂಕ್ಷಿಗಳಿಗೂ ಕರ್ನಾಟಕ ದಲ್ಲಿ ಸೀಟು ದೊರೆಯುತ್ತಿಲ್ಲ. ಹಾಗಾಗಿ ರಾಜ್ಯದ ಎಲ್ಲ ಬಗೆಯ ವೈದ್ಯಕೀಯ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗಾಗಿಯೇ ಶೇ.50ರಷ್ಟು ಸೀಟುಗಳನ್ನು ಮೀಸಲಿಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿದ್ಯಾ ರ್ಥಿಗಳಿಗೆ ವೈದ್ಯಕೀಯ ಸೀಟು ಲಭ್ಯತೆ ಕಡಿಮೆ ಯಾಗುವುದರಿಂದ ಭವಿಷ್ಯದಲ್ಲಿ ಕರ್ನಾಟಕ ಮೂಲದ ವೈದ್ಯರ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ ಎಂಬ ಆತಂಕ ಸರ್ಕಾರದಲ್ಲಿದೆ. ಇದೇ ಕಾರಣದಿಂದ ಈಗಾಗಲೇ ನೆರೆಯ ತಮಿಳುನಾಡು ಸರ್ಕಾರ ಕಾಯ್ದೆಯೊಂದನ್ನು ರೂಪಿಸಿ ಸ್ಥಳೀಯ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದಿಷ್ಟ ಪ್ರಮಾಣದ ಸೀಟುಗಳನ್ನು ಆ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡುವಂತೆ ಮಾಡಿದೆ. ಅದೇ ಮಾದರಿಯನ್ನು ಈಗ ರಾಜ್ಯ ಸರ್ಕಾರ ಅನುಸರಿಸುವ ಪ್ರಯತ್ನದಲ್ಲಿದೆ.

click me!