ಹೈದ್ರಾಬಾದ್‌ ಕರ್ನಾಟಕದಲ್ಲಿ 10187 ಹುದ್ದೆಗೆ ನೇರ ನೇಮಕ

By Web DeskFirst Published Nov 17, 2018, 10:55 AM IST
Highlights

ಹೈದರಾಬಾದ್‌ ಕರ್ನಾಟಕದ ಜನರಿಗೆ ಸಂತಸದ ಸುದ್ದಿ. ಹಿಂದುಳಿದಿರುವ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡುವ ಅನುಚ್ಛೇದ 371 ಜೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಖಾಲಿ ಇರುವ 10,187 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು[ನ.17]: ಹೈದರಾಬಾದ್‌ ಕರ್ನಾಟಕದ ಜನರಿಗೆ ಸಂತಸದ ಸುದ್ದಿ. ಹಿಂದುಳಿದಿರುವ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡುವ ಅನುಚ್ಛೇದ 371 ಜೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಖಾಲಿ ಇರುವ 10,187 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

371ಜೆ ಅಡಿಯಲ್ಲಿ ರಚಿಸಲಾದ ಪ್ರಾದೇಶಿಕ ಮಟ್ಟ/ ರಾಜ್ಯ ಮಟ್ಟಹಾಗೂ ರಾಜ್ಯ ವ್ಯಾಪಿ ಸ್ಥಳೀಯ ಸಂಸ್ಥೆಗಳಲ್ಲಿ ಅಪಾರ ಪ್ರಮಾಣದ ಹುದ್ದೆಗಳು ಖಾಲಿ ಇರುವುದರಿಂದ ಸುಗಮ ಆಡಳಿತಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಗಳ ಮುಖ್ಯಸ್ಥರು, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಆದ್ಯತೆ ಮೇರೆಗೆ ಭರ್ತಿ ಮಾಡುವಂತೆ ಸೂಚಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ ಅನ್ವಯ ಆದೇಶ ಹೊರಡಿಸಲಾಗಿದೆ.

ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುವ ಪ್ರಕರಣಗಳನ್ನು ಆದಷ್ಟುಶೀಘ್ರವೇ ಪೂರ್ಣಗೊಳಿಸಬೇಕು. 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೊರಡಿಸಿರುವ ಸುತ್ತೋಲೆ ಪ್ರಕಾರ ಸ್ಥಳೀಯ ವೃಂದ ರಚಿಸಿ, ಅಧಿಸೂಚಿಸಿ, ಖಾಲಿ ಹುದ್ದೆಗಳನ್ನು ತುಂಬಬೇಕು, ಗ್ರೂಪ್‌ ಡಿ ಹಾಗೂ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.-ಹೈ-ಕ ಭಾಗದ ಆರು ಜಿಲ್ಲೆಗಳ ಜನರಿಗೆ ‘ಸಿ’ ಗುಂಪಿನ ಹುದ್ದೆಗಳಲ್ಲಿ ಗರಿಷ್ಠ ನೇಮಕಾತಿ ನಡೆಯಲಿದೆ.

ಎಷ್ಟು ಹುದ್ದೆ?:

ನಗರಾಭಿವೃದ್ಧಿ ಇಲಾಖೆಯಲ್ಲಿ 3467 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 1345, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 823, ಇಂಧದನ ಇಲಾಖೆ 784, ಜಲಸಂಪನ್ಮೂಲ ಇಲಾಖೆ 583, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 417,ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆಯಲ್ಲಿ 361 ಹುದ್ದೆಗಳು ಸೇರಿ​ದಂತೆ ನವೆಂಬರ್‌ 11ಕ್ಕೆ ಸರ್ಕಾ​ರದ 40 ಇಲಾಖೆಗಳಲ್ಲಿ ಒಟ್ಟು 10,187 ಹುದ್ದೆಗಳು ಖಾಲಿ ಇವೆ.

ಈ ಎಲ್ಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

click me!