ಸುರಕ್ಷತಾ ಕ್ರಮ ಅನುಸರಿಸಿ ಸೆ.7ರಿಂದ ಡಿಪ್ಲೊಮಾ ಪರೀಕ್ಷೆ

By Kannadaprabha NewsFirst Published Aug 31, 2020, 7:40 AM IST
Highlights

ಸೆ.7ರಿಂದ 28ರ ವರೆಗೆ ರಾಜ್ಯಾದ್ಯಂತ ಡಿಪ್ಲೋಮಾ ಅಂತಿಮ ಸೆಮಿಸ್ಟರ್‌ ಥಿಯರಿ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳನ್ನು ನಡೆಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯನಿರ್ವಹಣಾ ಕ್ರಮವನ್ನು (ಎಸ್‌ಒಪಿ) ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದೆ.

ಬೆಂಗಳೂರು (ಆ.31):  ಎಸ್‌ಎಸ್‌ಎಲ್‌ಸಿ ಹಾಗೂ ಸಿಇಟಿ ಪರೀಕ್ಷೆಗಳ ಮಾದರಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು ಡಿಪ್ಲೊಮಾ ಪರೀಕ್ಷೆಗಳನ್ನು ನಡೆಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.

ಸೆ.7ರಿಂದ 28ರ ವರೆಗೆ ರಾಜ್ಯಾದ್ಯಂತ ಡಿಪ್ಲೋಮಾ ಅಂತಿಮ ಸೆಮಿಸ್ಟರ್‌ ಥಿಯರಿ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳನ್ನು ನಡೆಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯನಿರ್ವಹಣಾ ಕ್ರಮವನ್ನು (ಎಸ್‌ಒಪಿ) ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ನಿರ್ದೇಶನ ನೀಡಿದೆ. ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಎಸ್‌ಒಪಿಯನ್ನು ನೀಡಿದೆ.

ಸುರಕ್ಷತಾ ಕ್ರಮಗಳೇನು?:

ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳಬೇಕು, ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಕಸದ ಬುಟ್ಟಿಗಳ ವ್ಯವಸ್ಥೆ ಮಾಡಬೇಕು. ಕಾಲೇಜುಗಳ ಬಸ್‌ಗಳು ಇದ್ದಲ್ಲಿ ಪ್ರತಿನಿತ್ಯ ಸ್ಯಾನಿಟೈಸ್‌ ಮಾಡಬೇಕು. ಥರ್ಮಲ್‌ ಸ್ಕಾ್ಯನರ್‌, ಮಾಸ್ಕ್‌ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು.

ಡಿಪ್ಲೊಮಾ : ಸೆ.30ರೊಳಗೆ ಅಡ್ಮಿಶನ್ ಮಾಡಿಸಿ...

ಕೊರೋನಾ ಸೋಂಕಿರುವ ಅಧಿಕಾರಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದು. ಉತ್ತರ ಪತ್ರಿಕೆಗಳನ್ನು ಯಾವುದೇ ಕಾರಣಕ್ಕೂ ಸ್ಯಾನಿಟೈಸ್‌ ಮಾಡಬಾರದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಕೇಂದ್ರದ ಮುಂದೆ ಹಾಜರಿರಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರ ಮತ್ತು ಐಡಿ ಕಾರ್ಡ್‌ ಇಟ್ಟುಕೊಂಡು ನಿರ್ಬಂಧಿತ ಸ್ಥಳಗಳಲ್ಲಿ ಓಡಾಡುವಾಗ ಇದನ್ನು ಪಾಸ್‌ ರೀತಿ ಬಳಕೆ ಮಾಡಬೇಕು ಎಂದಿ ಸೂಚಿಸಲಾಗಿದೆ.

ಕೊರೋನಾ ಪಾಸಿಟಿವ್‌ ಬಂದಿರುವ ವಿದ್ಯಾರ್ಥಿಗಳು ಎರಡು ದಿನ ಮೊದಲೇ ಕಾಲೇಜಿನ ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಬೇಕು. ಆ ನಂತರ ಕಾಲೇಜು ಆಡಳಿತ ಮಂಡಳಿಯು ಅಂತಹ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಸ್ಥಳೀಯ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುಜಿಸಿ, ಎಐಸಿಟಿಇ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣ ಕುರಿತು ನೀಡುವ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಇಲಾಖೆಯು ರಾಜ್ಯದ ಎಲ್ಲ ಪ್ರಾಂಶುಪಾಲರಿಗೆ ಸೂಚಿಸಿದೆ.

click me!