ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ: 15 ಸಂಘಟನೆಗಳಿಂದ ಒತ್ತಡ| ಪರೀಕ್ಷೆ ಸದ್ಯಕ್ಕೆ ಬೇಡ: ಸಿಎಂಗೆ ಮನವಿ
ಬೆಂಗಳೂರು(ಮೇ.26): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಜಿ. ಸಿದ್ದರಾಮಯ್ಯ ಸೇರಿದಂತೆ ಸಮಾಜದ ವಿವಿಧ ಗಣ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೋರಿದ್ದಾರೆ.
ನಾಡಿನ ಸುಮಾರು 15 ಪ್ರಮುಖ ಸಂಘಟನೆಗಳ ಮುಖಂಡರ ಸಹಿ ಹೊಂದಿರುವ ಪತ್ರವೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಲಾಗಿದ್ದು, ಇದರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸುವುದು ಹೇಗೆ ಎಂಬ ಆತಂಕ ಪಾಲಕರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯವೇ? ಇದು ಅಷ್ಟೊಂದು ಮುಖ್ಯವೇ? ಈ ಸಮಯದಲ್ಲಿ ಪರೀಕ್ಷೆ ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎಂದು ಪ್ರಶ್ನಿಸಲಾಗಿದೆ.
undefined
ರಾಜ್ಯದಲ್ಲಿ 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ 2 ಲಕ್ಷ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇವರಲ್ಲಿ ಒಬ್ಬ ಸಿಬ್ಬಂದಿಗೆ ಕೊರೋನಾ ಸೋಂಕು ಬಂದರೆ ಅದು ಎಲ್ಲರಿಗೂ ಹರಡಲಿದೆ. 8 ಲಕ್ಷ ಮಕ್ಕಳನ್ನು ಥರ್ಮಲ್ ಸ್ಕಾ್ಯನಿಂಗ್ ಒಳಪಡಿಸಿ ಪರೀಕ್ಷೆ ನಡೆಸುವುದು ಸವಾಲಿನ ಕೆಲಸ. ಜ್ವರ ಬಂದವರು ಔಷಧಿ ಪಡೆದು ಎಲ್ಲ ಮಕ್ಕಳ ಜತೆಗೆ ಪರೀಕ್ಷೆ ಬರೆದರೆ ಏನು ಗತಿ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಪರೀಕ್ಷೆಯಲ್ಲಿ ನೇರವಾಗಿ ಭಾಗಿಯಾಗುವವರಿಗೆ ಸೋಂಕು ಹರಡುವ ಭಯ. ಅವರ ಕುಟುಬದವರಿಗೆ ಯಾವಾಗ ಏನಾಗುವುದೋ ಎನ್ನುವ ಆತಂಕ. ಮತ್ತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಕೂಡ ಅದೇ ಬಗೆಯ ಉದ್ವೇಗ ಮತ್ತು ಒತ್ತಡ ಹೆಚ್ಚುವುದಿಲ್ಲವೇ. ಈ ರೀತಿ ಭೀತಿಯಿರುವಾಗ ಪರೀಕ್ಷೆ ನಡೆಸಬೇಕೆ?
- ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಪರಿಸ್ಥಿತಿ ಸಾಕಷ್ಟುಹದಗೆಟ್ಟಿದ್ದು, ಈ ವೇಳೆಯಲ್ಲಿಯೂ ಮುಂದೇನು ಆಗಲಿದೆ ಎಂಬುದು ಯಾರಿಗೂ ತಿಳಿಯದಾಗಿದೆ. ಈ ವೇಳೆ ಶಿಕ್ಷಣ ಇಲಾಖೆ ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಪರೀಕ್ಷೆ ನಡೆಸಲು ಸೂಕ್ತ ಸಮಯವಲ್ಲ. ನಿರ್ಧಾರ ಕೈಬಿಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಾಮರಾಜನಗರ ಹೊರತುಪಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಂಟೈನ್ಮೆಂಟ್ ಜೋನ್‌ಗಳಿವೆ.
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್, ಪ್ರಾಥಮಿಕ ಶಿಕ್ಷಕರ ಫೆಡರೇಷನ್, ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘ ಸೇರಿದಂತೆ 15ಕ್ಕೂ ಹೆಚ್ಚಿನ ಸಂಘಟನೆಗಳ ಮುಖ್ಯಸ್ಥರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.