ಇನ್ನು ನೀರು ಹರಿಸಲು ಸಾಧ್ಯವೇ ಇಲ್ಲ ಕೇಂದ್ರ ತಜ್ಞರ ಸಮಿತಿಗೆ ರಾಜ್ಯ ಸ್ಪಷ್ಟನೆ

Published : Oct 11, 2016, 02:38 PM ISTUpdated : Apr 11, 2018, 12:42 PM IST
ಇನ್ನು ನೀರು ಹರಿಸಲು ಸಾಧ್ಯವೇ ಇಲ್ಲ ಕೇಂದ್ರ ತಜ್ಞರ ಸಮಿತಿಗೆ ರಾಜ್ಯ ಸ್ಪಷ್ಟನೆ

ಸಾರಾಂಶ

ಬೆಂಗಳೂರು (ಅ.11): ಕಾವೇರಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ದಾಖಲೆ ಎರಡನೇ ಬಾರಿಗೆ ಕನಿಷ್ಟಸಂಗ್ರಹವೆನಿಸಿದೆ. ಕಳೆದ 41 ವರ್ಷಗಳಲ್ಲಿ ಇಷ್ಟುಕನಿಷ್ಟಸಂಗ್ರಹವನ್ನೇ ಕಾವೇರಿ ಅಣೆಕಟ್ಟುಗಳು ಕಂಡಿರಲಿಲ್ಲ. ಹೀಗಾಗಿ ಯಾವ ಕಾರಣಕ್ಕೂ ಕರ್ನಾಟಕ ತನ್ನ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲವೆಂದು ತಜ್ಞರ ತಂಡಕ್ಕೆ ಸ್ಪಷ್ಟಮಾತುಗಳಲ್ಲಿ ತಿಳಿಸಿದೆ. ತಜ್ಞರ ಸಮಿತಿಗೆ ರಾಜ್ಯ ಸಲ್ಲಿಸಿರುವ ವಿವರಗಳು ದಾಖಲೆ ಸಹಿತ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಪ್ರಶಾಂತ್‌ಕುಮಾರ್‌ ಎಂ.ಎನ್‌.

ಬೆಂಗಳೂರು (ಅ.11): ಕಾವೇರಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ದಾಖಲೆ ಎರಡನೇ ಬಾರಿಗೆ ಕನಿಷ್ಟಸಂಗ್ರಹವೆನಿಸಿದೆ. ಕಳೆದ 41 ವರ್ಷಗಳಲ್ಲಿ ಇಷ್ಟುಕನಿಷ್ಟಸಂಗ್ರಹವನ್ನೇ ಕಾವೇರಿ ಅಣೆಕಟ್ಟುಗಳು ಕಂಡಿರಲಿಲ್ಲ. ಹೀಗಾಗಿ ಯಾವ ಕಾರಣಕ್ಕೂ ಕರ್ನಾಟಕ ತನ್ನ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲವೆಂದು ತಜ್ಞರ ತಂಡಕ್ಕೆ ಸ್ಪಷ್ಟಮಾತುಗಳಲ್ಲಿ ತಿಳಿಸಿದೆ. ತಜ್ಞರ ಸಮಿತಿಗೆ ರಾಜ್ಯ ಸಲ್ಲಿಸಿರುವ ವಿವರಗಳು ದಾಖಲೆ ಸಹಿತ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಕಾವೇರಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ ಅ.4ರಂದು ನೀಡಿದ್ದ ಆದೇಶದಲ್ಲಿ ಸೂಚಿಸಿದಂತೆ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ ತಜ್ಞರ ಸಮಿತಿ ಕಳೆದ ಶುಕ್ರವಾರ ಮತ್ತು ಶನಿವಾರ ರಾಜ್ಯದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಪ್ರವಾಸ ಮಾಡಿದೆ. ಪ್ರವಾಸದ ಮುನ್ನ ಮತ್ತು ಬಳಿಕ ರಾಜ್ಯದ ಉನ್ನತಾಧಿಕಾರಿಗಳ ತಂಡ ಭಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ತಜ್ಞರನ್ನು ಭೇಟಿಯಾಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟಿರುವುದಲ್ಲದೇ 20 ಅಂಶಗಳನ್ನು ಮುಂದಿಟ್ಟು ಯಾವ ಕಾರಣಕ್ಕೆ ಕರ್ನಾಟಕದಿಂದ ನೀರು ಹರಿಸಲಾಗುವುದಿಲ್ಲ ಎಂಬ ವಿಚಾರವನ್ನು ತಿಳಿಸಿದೆ.

ರಾಜ್ಯದ ಪಾಲಿಗೆ ನೀರಾವರಿ ಮಾತ್ರವಲ್ಲ ಕುಡಿಯುವ ನೀರಿಗೂ ಜೀವನದಿ ಎನಿಸಿರುವ ಕಾವೇರಿ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಾಸರೆಯಾಗಿದೆ. ಮುಂಗಾರು ಪೂರ್ವ ಮಳೆಯ ಮೂಲಕ ಶೇ.15, ಮುಂಗಾರು ಮೂಲಕ ಶೇ. 68 ಹಾಗೂ ಶೇ.17ರಷ್ಟುಹಿಂಗಾರು ಮಳೆಯಿಂದ ಕಾವೇರಿ ಜಲಾಶಯಗಳಿಗೆ ನೀರು ಬರುತ್ತಿದ್ದು ಈ ಬಾರಿ ಪೂರ್ವ ಮುಂಗಾರು ಶೇ.34ರಷ್ಟುಕೊರತೆ ಉಂಟಾಗಿದ್ದರೆ ಕಬಿನಿ ಮತ್ತು ಕೆ.ಆರ್‌.ಎಸ್‌. ಜಲಾನಯನಗಳಲ್ಲಿ ಈ ಪ್ರಮಾಣ ಶೇ.47ರಷ್ಟಿತ್ತು. ಜೂನ್‌, ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ಗಳಲ್ಲಿ ಕೆ.ಆರ್‌.ಎಸ್‌ ಭಾಗದಲ್ಲಿ ಮಳೆ ವಿವರ ಒದಗಿಸಿರುವ ರಾಜ್ಯ ಕಾವೇರಿ ಜಲಾನಯನದಲ್ಲಿ ಜೂನ್‌ನಲ್ಲಿ ಮಾತ್ರ ಸರಾಸರಿಗಿಂತ ಶೇ.8ರಷ್ಟುಹೆಚ್ಚು ಮಳೆಯಾಗಿದ್ದರೆ ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ಗಳಲ್ಲಿ ಕ್ರಮವಾಗಿ-28%,-37% ಹಾಗೂ -51% ಮಳೆಯಾಗಿದೆ. ಇದೇ ವೇಳೆ ಕೆ.ಆರ್‌.ಎಸ್‌. ಕೆಳಭಾಗದಲ್ಲಿ ಕಬಿನಿಯಿಂದ ತಮಿಳುನಾಡಿನ ಬಿಳಿಗುಂಡ್ಲುವರೆಗೆ ಜೂನ್‌, ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ಗಳಲ್ಲಿ ಕ್ರಮವಾಗಿ +52%, +73%,-46% ಹಾಗೂ -75% ಮಳೆ ದಾಖಲಾಗಿದೆ.

ಜಲಾಶಯಗಳ ಸ್ಥಿತಿ

ಕಳೆದ 42 ವರ್ಷಗಳಲ್ಲಿ ಕಾವೇರಿ ಜಲಾಶಯಗಳ ನೀರಿನ ಮಟ್ಟಹೋಲಿಕೆ ಮಾಡಿದರೆ ಕಾವೇರಿಯ ಎಲ್ಲಾ ಜಲಾಶಯಗಳಲ್ಲಿ ಇಷ್ಟುಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿರುವುದು ಇದು ಎರಡನೇ ಬಾರಿ. ಒಳಹರಿವು ಪ್ರಮಾಣವೂ ಇಷ್ಟುಕಡಿಮೆ ಪ್ರಮಾಣದಲ್ಲಾಗಿರುವುದು ಮೂರನೇ ಸಲ. ಮುಂಗಾರು ಮಳೆ ಅಂತ್ಯಕ್ಕೆ ನಾಲ್ಕೂ ಜಲಾಶಯಗಳ ನೀರಿನ ಹುಟ್ಟುವಳಿ 257 ಟಿಎಂಸಿ ಇರಬೇಕಾಗಿತ್ತು. 41 ವರ್ಷಗಳ ಈ ಸರಾಸರಿಗೆ ಹೋಲಕೆ ಮಾಡಿದರೆ ಈ ಬಾರಿ ಕೇವಲ 131.51 ಟಿಎಂಸಿ(ಶೇ.51.2%) ನೀರು ಹುಟ್ಟುವಳಿಯಾಗಿದೆ ಎಂದು ರಾಜ್ಯ ವಿವರಗಳನ್ನು ತಜ್ಞರ ಸಮಿತಿಗೆ ನೀಡಿದೆ.

ಬೆಳೆ ತ್ಯಾಗ

ರಾಜ್ಯದ ಕಾವೇರಿ ಜಲಾನಯನದ ರೈತರು ಕೇವಲ ಒಂದೇ ಬೆಳೆ ಬೆಳೆಯುತ್ತಾರೆ. ಆದರೆ ತಮಿಳುನಾಡಿನವರು ಮೂರು ಬೆಳೆ ತೆಗೆಯುತ್ತಾರೆ. ಒಟ್ಟು 15.22 ಲಕ್ಷ ಎಕರೆ ಖಾರಿಫ್‌ ಬೆಳೆ ಬೆಳೆಯಬಹುದಾದ ಪ್ರದೇಶದಲ್ಲಿ ಬರಪರಿಸ್ಥಿತಿ ಇದ್ದುದರಿಂದ ಸರ್ಕಾರದ ನಿರಂತರ ಒತ್ತಾಯದ ಬಳಿಕ ಕೇವಲ 6.15ಲಕ್ಷ ಎಕರೆಯಲ್ಲಿ ಮಾತ್ರ ಬೆಳೆ ಬೆಳೆಯಲಾಗಿದ್ದು ರೈತರು ಬೆಳೆ ತ್ಯಾಗ ಮಾಡಿದ್ದಾರೆ. ಮಾತ್ರವಲ್ಲ ನಮ್ಮ ಕಾಲುವೆಗಳಿಗೆ ನೀರು ಹರಿಸದೇ ಇರುವುದರಿಂದ 1.88 ಲಕ್ಷ ಎಕರೆ ಬೆಳೆ ಒಣಗಿ ಬೆಳೆ ನಷ್ಟವಾಗಿದೆ. ಉಳಿದಿರುವ 4.27ಲಕ್ಷ ಎಕರೆ ಇದೀಗ ನೀರಿಲ್ಲದೇ ಮಣ್ಣಿನ ತೇವದ ಒತ್ತಡಕ್ಕೊಳಗಾಗಿದ್ದು ನೀರೊದಗಿಸದೇ ಹೋದರೆ ಸಂಪೂರ್ಣ ನಾಶವಾಗುವ ಪರಿಸ್ಥಿತಿಯಲ್ಲಿದೆ ಎಂದು ತಜ್ಞರ ಸಮಿತಿಗೆ ವಿವರಿಸಿದೆ.

 

ನಮಗೆಷ್ಟುನೀರು ಬೇಕು...

ಮುಂದಿನ ಮೇ.2017ರವರೆಗೆ ರಾಜ್ಯಕ್ಕೆ 67.18 ಟಿಎಂಸಿ ನೀರು ಬೇಕಿದೆ. ಕುಡಿಯಲು 23.05ಟಿಎಂಸಿ ನೀರು ಬೇಕಿದ್ದು ಪ್ರಸ್ತುತ ಸಂಗ್ರಹ 32.005 ಟಿಎಂಸಿ ಇದ್ದು 15.171 ಟಿಎಂಸಿ ಮುಂದಿನ ದಿನಗಳಲ್ಲಿ ಒಳಹರಿವು ಅಂದಾಜಿಸಿದರೂ ರಾಜ್ಯದ ಅಗತ್ಯತೆಗೆ ನೀರು ಸಾಲುವುದಿಲ್ಲ. ಮುಂದಿನ ಹಿಂಗಾರು ಮಳೆ ತಮಿಳುನಾಡಿಗೆ ಲಾಭದಾಯಕವಾಗಿರುವುದು ಮಾತ್ರವಲ್ಲ ಸುಮಾರು ಶೇ.48ರಷ್ಟುನೀರು ಒದಗಿಸಲಿದೆ. ಈ ಮಳೆಯೇ ಸುಮಾರು 63.86 ಟಿಎಂಸಿ ನೀರನ್ನು ಕರ್ನಾಟಕ ಬಿಳಿಗುಂಡ್ಲು ಜಲಾನಯನ ಪ್ರದೇಶಗಳಿಂದ ಹುಟ್ಟುವಳಿ ಆಗಲಿದೆ. ತಮಿಳುನಾಡಿನ ಅಂತರ್ಜಲ ಪರಿಸ್ಥಿತಿಯೂ ರಾಜ್ಯಕ್ಕಿಂತ ಎಷ್ಟೋ ಪಾಲು ಉತ್ತಮವಾಗಿದ್ದು ಈ ಪರಿಸ್ಥಿತಿಯಲ್ಲಿ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಾಗದು ಎಂದು ತಜ್ಞರ ಸಮಿತಿಗೆ ಸ್ಪಷ್ಟಪಡಿಸಿದೆ.

ನಮ್ಮ ಜಲಾಶಯಗಳ ವಾಸ್ತವ ಪರಿಸ್ಥಿತಿಯ ಅಂಕಿ ಅಂಶಗಳನ್ನು ಕೇಂದ್ರದ ತಜ್ಞರ ಸಮಿತಿಗೆ ನೀಡಲಾಗಿದೆ. ಪ್ರವಾಸದ ವೇಳೆ ಇದು ಅವರಿಗೆ ಮನದಟ್ಟೂಆಗಿದೆ. ನಾವು ಸುಳ್ಳು ಹೇಳುತ್ತಿಲ್ಲವೆಂದು ಅವರು ಪ್ರತ್ಯಕ್ಷವಾಗಿ ನೋಡಿದ್ದಾರೆ. ನಮ್ಮ ಕುಡಿಯುವ ಹಾಗೂ ಬೆಳೆಗಳ ಅಗತ್ಯತೆ ಮುಂದಿನ ಮೇ ವರೆಗಿನ ಬೇಡಿಕೆ ಇವೆಲ್ಲ ಅಂಕಿ ಅಂಶಗಳೊಂದಿಗೆ ಏಕೆ ನೀರು ಹರಿಸಲು ಸಾಧ್ಯವಾಗದು ಎಂಬುದನ್ನು ಹೇಳಿದ್ದೇವೆ.

- ಜಿ.ಎಸ್‌.ಶ್ರೀನಿವಾಸ ರೆಡ್ಡಿ

ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ   

ಕನ್ನಡ ಫ್ರಭ ವರದಿ

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ