ವಿದ್ಯಾರ್ಥಿನಿ ಜೈಬುನ್ನೀಸಾಳದ್ದು ಆತ್ಮಹತ್ಯೆಯಲ್ಲ, ಕೊಲೆ: ಪೋಷಕರ ಆರೋಪ

By Suvarna Web DeskFirst Published Jan 27, 2018, 1:09 PM IST
Highlights

ಇತ್ತೀಚೆಗೆ ಕೆ.ಆರ್.ಪೇಟೆ ಅಲ್ಪಸಂಖ್ಯಾತ ವಸತಿ ಗೃಹದಲ್ಲಿ ನಿಗೂಢವಾಗಿ ಮೃತಪಟ್ಟ ಜೈಬುನ್ನಿಸಾ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮಗಳ ಸಾವಿಗೆ ದೈಹಿಕ ಶಿಕ್ಷಕ ರವಿಯೇ ಕಾರಣವೆಂದು ಪೋಷಕರು ಆರೋಪಿಸುತ್ತಿದ್ದಾರೆ.

ಮಂಗಳೂರು: ಇತ್ತೀಚೆಗೆ ಕೆ.ಆರ್.ಪೇಟೆ ಅಲ್ಪಸಂಖ್ಯಾತ ವಸತಿ ಗೃಹದಲ್ಲಿ ನಿಗೂಢವಾಗಿ ಮೃತಪಟ್ಟ ಜೈಬುನ್ನಿಸಾ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮಗಳ ಸಾವಿಗೆ ದೈಹಿಕ ಶಿಕ್ಷಕ ರವಿಯೇ ಕಾರಣವೆಂದು ಪೋಷಕರು ಆರೋಪಿಸುತ್ತಿದ್ದಾರೆ.

ಜನವರಿ 24ರಂದು ಜೈಬುನ್ನಿಸಾ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಯಾವುದೋ ರಹಸ್ಯ ಗೊತ್ತಿದ್ದ ಮಗಳನ್ನು ಶಿಕ್ಷಕ ರವಿ ಕೊಂದಿದ್ದಾರೆಂದು ವಿದ್ಯಾರ್ಥಿನಿಯ ಪೋಷಕರು ಹೇಳುತ್ತಿದ್ದು, ಮಗಳೊಂದಿಗೆ ಮಾತನಾಡಿದ ಆಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಜೈಬುನ್ನಿಸಾ ಪೋಷಕರು ವಾಸವಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟಿದ್ದಾರೆ. 'ಶಿಕ್ಷಕ ರವಿಯೇ ಕೊಂದು ನೇಣಿಗೆ ಬಿಗಿದಿದ್ದಾನೆ. ನನ್ನ ಮಗಳಿಗೆ ಯಾವುದೋ ಒಂದು ರಹಸ್ಯ ವಿಚಾರ ತಿಳಿದಿತ್ತು. ಸಾವಿಗೂ ಮುನ್ನ ಅದೇ ಶಾಲೆಯಲ್ಲಿರುವ ತನ್ನ ತಂಗಿಯ ಬಳಿ ಹೇಳಿದ್ದಳು. ಅಂದು ರಾತ್ರಿ  ರಹಸ್ಯ ವಿಚಾರ ತಿಳಿಸುವುದಾಗಿ ಹೇಳಿ ಕೊಂಡಿದ್ದಳು. ಅದಕ್ಕೂ ಮುಂಚೆಯೇ ನಮ್ಮ ಮಗಳನ್ನು ಶಿಕ್ಷಕ ರವಿ ಕೊಂದಿದ್ದಾನೆ,' ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

'ಅಲ್ಲಿ ನಡೆದಿದ್ದ ಯಾವುದೋ ವಿಚಾರ ನಮ್ಮ ಮಗಳಿಗೆ ಗೊತ್ತಿತ್ತು. ಅದಕ್ಕಾಗಿ ಕೊಲೆ ಮಾಡಿ ವೇಲ್‌ನಿಂದ ನೇಣು ಹಾಕಿ ಆತ್ಮಹತ್ಯೆಯ ನಾಟಕವಾಡಿದ್ದಾನೆ. ಮಗಳ ಶವವನ್ನು ರವಿಯೇ ನೇಣಿನಿಂದ ಬಿಚ್ಚಿ ಆಸ್ಪತ್ರೆಗೆ ಸಾಗಿಸಿದ್ದಾನೆ. ಜೈಬುನ್ನಿಸಾ ಕೊಲೆ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಬೇಕು,' ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.

'ನನ್ನ ಮಗಳಿಗೆ ಶಿಕ್ಷ ರವಿ, ಮಾನಸಿಕ ಮತ್ತು ದೈಹಿಕ ಹಿಂಸೆ ರವಿ ನೀಡಿದ್ದಾನೆ. ಸಾವಿಗೂ ಮುನ್ನ ಮಗಳೇ ರವಿಯ ಚಿತ್ರಹಿಂಸೆಯ ಬಗ್ಗೆ ಕರೆ ಮಾಡಿ ಹೇಳಿಕೊಂಡಿದ್ದಳು. ಆತನನ್ನು ಬಂಧಿಸಿದ್ದಾಗಿ ಪೊಲೀಸರು ಹೇಳುತ್ತಿದ್ದರೂ, ಆರೋಪಿಯನ್ನು ತೋರಿಸ್ತಿಲ್ಲ. ಇದೀಗ ಇಡೀ ಪ್ರಕರಣವನ್ನ ಮುಚ್ಚಿ ಹಾಕಲು ರಾಜಕೀಯದವರು ಯತ್ನಿಸಿದ್ದಾರೆ,' ಎಂದು ಸುವರ್ಣ ನ್ಯೂಸ್‌ಗೆ ಜೈಬುನ್ನಿಸಾ ಪೋಷಕರ ಗಂಭೀರ ಆರೋಪಿಸಿದ್ದಾರೆ.
 

click me!