
ಮೈಸೂರು (ಅ.31): ಮೈಸೂರು ವಿವಿಯಲ್ಲಿ ಕನ್ನಡ ಕೆಲಸ ಮಾಡಿದವರಿಗೆ ಪಿಂಚಣಿಯಲ್ಲಿ ಅನ್ಯಾಯವೆಸಗಿದ್ದು, ಹಣಕಾಸು ಅಧಿಕಾರಿಗಳು ಸಿಂಡಿಕೇಟ್ ನಿರ್ಣಯ ಪಾಲಿಸುತ್ತಿಲ್ಲ ಎಂದು ಸ.ರ. ಸುದರ್ಶನ, ಹಾ.ತಿ. ಕೃಷ್ಣೇಗೌಡ, ಬಾ.ವೇ. ಶ್ರೀಧರ್, ವೈ.ಸಿ. ಭಾನುಮತಿ ದೂರಿದ್ದಾರೆ.
ರಾಜ್ಯಪಾಲರು ಹಾಗೂ ಸರ್ಕಾರದಿಂದ ಅಂಗೀಕೃತವಾದ ಪರಿನಿಯಮದ ಪ್ರಕಾರ 62 ವರ್ಷದವರೆಗೆ ಸೇವೆ ಸಲ್ಲಿಸಿ, ಕನ್ನಡದ ಕೆಲಸಗಳಲ್ಲಿ ಪ್ರಾಮಾಣಿಕವಾಗಿ ಪ್ರಸಾರಾಂಗ ಹಾಗೂ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ದುಡಿದ ಸ.ರ. ಸುದರ್ಶನ, ಹಾ.ತಿ. ಕೃಷ್ಣೇಗೌಡ, ಬಾವೇ. ಶ್ರೀಧರ, ವೈ.ಸಿ. ಭಾನುಮತಿ ಇವರಿಗೆ ಕಡೆಯ ತಿಂಗಳ ವೇತನ ಆಧರಿಸಿ, ರಾಜ್ಯ ಸರ್ಕಾರ ವೇತನ ಶ್ರೇಣಿಯಲ್ಲಿ ಪಿಂಚಣಿ ಸೌಲಭ್ಯ ನೀಡಬೇಕೆಂದು ಇಬ್ಬರು ಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆದಿರುವ ಮೂರು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯವಾಗಿದ್ದರೂ ಹಣಕಾಸು ಅಧಿಕಾರಿಗಳು ಹಾಗೂ ಕುಲಸಚಿವರು ಅದನ್ನು ಜಾರಿಗೆ ಕೊಡದೆ, ಅಧಿಕಾರ ಮೀರಿ ವರ್ತಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೇಲ್ಕಂಡ ನಾಲ್ವರ ಹುದ್ದೆಗಳನ್ನು ರಾಜ್ಯಪಾಲರು 2012ರ ಜ.31 ರಂದು ಮಂಜೂರಾತಿ ನೀಡಿದ ಪರಿನಿಯಮದ ಪ್ರಕಾರ ಶೈಕ್ಷಣಿಕ ಹುದ್ದೆಗಳಾಗಿ ಉನ್ನತ ದರ್ಜೆಗೆ ಏರಿಸಿ, ಸೇವಾವಯವನ್ನು 62 ವರ್ಷಗಳಿಗೆ ಹೆಚ್ಚಿನ ಯುಜಿಸಿ ವೇತನ ಶ್ರೇಣಿಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅವರು 2014ರಲ್ಲಿ 62 ವರ್ಷದವರೆಗೆ ಸೇವೆ ಸಲ್ಲಿಸಿ ನಿವೃತ್ತರಾದಾಗ ನಿವೃತ್ತಿ ಸೌಲಭ್ಯಗಳನ್ನು 60 ವರ್ಷದ ಸೇವೆಗೆ ಮಿತಿಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಬಾ.ವೇ. ಶ್ರೀಧರ ಅವರು ಹೈಕೋರ್ಟ್’ನಲ್ಲಿ ದಾವೆ ಹಾಕಿದ್ದರು. ಉಳಿದ ಮೂವರು ತಮಗಾದ ಅನ್ಯಾಯಗ ಬಗ್ಗೆ ಮನವಿಗಳನ್ನು ಸಲ್ಲಿಸುತ್ತಲೇ ಇದ್ದರು. ನ್ಯಾಯಾಲಯದಲ್ಲಿ ವಿವಿ ವಾದ ನಿಲ್ಲದು ಎಂದು ವಕೀಲರು ಅಭಿಪ್ರಾಯಪಟ್ಟ ಹಿನ್ನೆಲೆ ಎರಡು ವರ್ಷಗಳ ನಂತರ ಯುಜಿಸಿ ವೇತನದ ಬದಲಿಗೆ ಕಡೆಯ ತಿಂಗಳ ವೇತನ ಆಧರಿಸಿ ಪಿಂಚಣಿ ಸೌಲಭ್ಯ ಕೊಡುವುದಾಗಿ ಹೇಳಿದಾಗ ಸಂಧಾನದ ಕ್ರಮವಾಗಿ ನಾಲ್ವರು ಒಪ್ಪಿದ್ದರು. ಅದರಂತೆ 2016ರಂದು ಜು.7ರಂದು ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ನಾಲ್ವರಿಗೆ 62 ವರ್ಷದವರೆಗಿನ ಸೇವೆ ಆಧರಿಸಿ ಪಿಂಚಣಿ ಸೌಲಭ್ಯ ಕೊಡುವುದಾಗಿ ನಿರ್ಣಯಿಸಲಾಯಿತು. ಆದರೆ ಅದಕ್ಕೆ ಬಾ.ವೇ. ಶ್ರೀಧರ ಅವರು ಹೈಕೋರ್ಟ್ ದಾವೆಯನ್ನು ಹಿಂತೆಗೆದುಕೊಳ್ಳಬೇಕೆಂಬ ಷರತ್ತನ್ನು ವಿವಿ ನಿಲಯವು ವಿನಂತಿಸಿತು. ಅದರಂತೆ ದಾವೆ ಹಿಂಪಡೆದರು.
ಸಭೆಯ ನಿರ್ಣಯಂದೆತ ವಿವಿ ನಿಲಯದ ಕಾನೂನು ಸಲಹೆಗಾರರ ಅಭಿಪ್ರಾಯವನ್ನೂ ಪಡೆಯಲಾಯಿತು. ರಾಜ್ಯಪಾಲರಿಂದ ಅಂಗೀಕೃತವಾದ ಪರಿನಿಯಮದಂತೆ ನಾಲ್ವರು 62 ವರ್ಷ ಸೇವೆ ಸಲ್ಲಿಸಿರುವುದರಿಂದ ಸಿಂಡಿಕೇಟ್ ನಿರ್ಣಯ ಅನುಷ್ಠಾನವಾಗಲೇಬೆಂದು ಅವರು ಅಭಿಪ್ರಾಯ ನೀಡಿದ್ದಾರೆ. ಹಾಗಿದ್ದರೂ ಈಗಿನ ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳು ಸಿಂಡಿಕೇಟಿನ ಆದೇಶ ಪಾಲನೆ ಮಾಡಿಲ್ಲ. ವಿವಿಯು ಕೂಡಲೇ ನಮಗೆ ನ್ಯಾಯ ಕೊಡಿಸದೇ ಇದ್ದಲ್ಲಿ ಹೋರಾಟ ಮಾರ್ಗ ತುಳಿಯುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.