
ರಾಯಚೂರು (ಡಿ.03): ಮುಂದಿನ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರಿನಲಲ್ಲಿ ನಡೆಯಲಿದೆ.
1916ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಶ್ರೀ ನಾಲ್ವಿಡಿ ಕೃಷ್ಣರಾಜ ಒಡೆಯರಿಂದ ಸ್ಥಾಪಿತವಾಗಿತ್ತು. ಅವರ ಜಿಲ್ಲೆಯಲ್ಲಿಯೇ ನಡೆಯುತ್ತಿರುವುದು ಸಾಂಸ್ಕೃತಿಕ ನಗರಿಯ ಸಾಹಿತ್ಯ ಶ್ರೀಮಂತಿಕೆಗೆ ಇಂಬು
ನೀಡಿದಂತಾಗಿದೆ. ಮುಂದಿನ ಸಾಹಿತ್ಯ ಸಮ್ಮೇಳನಕ್ಕಾಗಿ ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಯಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಕಸಾಪ ಕಾರ್ಯಕಾರಿ
ಸಮಿತಿ ಸಭೆಯಲ್ಲಿ ಮೈಸೂರು ಜಿಲ್ಲೆಯ ಕಡೆ ಹೆಚ್ಚಿನ ಸದಸ್ಯರು ಒಲವು ತೋರಿದ್ದರಿಂದ ಸಾಂಸ್ಕೃತಿಕ ನಗರಿಗೆ ಸಮ್ಮೇಳನ ದಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿ 2018ಕ್ಕೆ ಕೊನೆಗೊಳ್ಳುವುದರಿಂದ ಅವರ ಅವಧಿಯಲ್ಲಿನ ಕೊನೆ ಸಮ್ಮೇಳನವನ್ನು ತಮ್ಮದೇ ಜಿಲ್ಲೆಗೆ ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ 2017ರ ಡಿಸೆಂಬರ್ ಒಳಗೆ ಸಮ್ಮೇಳನ ನಡೆಯುವ ಸಾಧ್ಯತೆ ಇದೆ.
ಈ ಹಿಂದೆ ಮೈಸೂರಿನಲ್ಲಿ 1930ರಲ್ಲಿ ಆಲೂರು ವೆಂಕಟರಾಯರು, 1955ರಲ್ಲಿ ಡಾ. ಶಿವರಾಮ ಕಾರಂತ, 1991ರಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು. ಮುಂದೆ ನಡೆಯಲಿರುವುದು ನಾಲ್ಕನೇ ಸಮ್ಮೇಳನ.
ಚಿಕ್ಕಬಳ್ಳಾಪುರ ಕಸಾಪ ಪ್ರತಿಭಟನೆ
ಮುಂದಿನ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಮೊದಲೆ ಚಿಕ್ಕಬಳ್ಳಾಪುರ ಕಸಾಪ ಘಟಕದಿಂದ ವತಿಯಿಂದ ಶಾಂತರಸ ಮುಖ್ಯ ವೇದಿಕೆ ಮುಂಭಾಗ ಸಮ್ಮೇಳವನ್ನು ತಮ್ಮ ಜಿಲ್ಲೆಯಲ್ಲಿಯೇ ನಡೆಸುವಂತೆ ಪ್ರತಿಭಟನೆ ನಡೆಸಲಾಯಿತು. ಆದರೆ ಅವರಿಗೆ ಸಮ್ಮೇಳನ ಭಾಗ್ಯ ಸಿಗಲಿಲ್ಲ.