
ನಾಯಕನಹಟ್ಟಿ (ಅ.12): ತನ್ನ ಸಹಚರನೊಂದಿಗೆ ತೆರಳಿ ಮನೆಗೆ ವಾಪಸ್ಸು ಬಾರದೇ ನಿಗೂಢವಾಗಿ ಕಾಣೆಯಾಗಿದ್ದ ವ್ಯಕ್ತಿ ಬುಧವಾರ ಮರಳಿ ಗ್ರಾಮಕ್ಕೆ ಬಂದಿರುವ ಘಟನೆ ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಪಟ್ಟಣದ ತಿಪ್ಪೇಸ್ವಾಮಿ ಕಾಣೆಯಾಗಿದ್ದ ವ್ಯಕ್ತಿ. ಮನುಮೈನಹಟ್ಟಿಗ್ರಾಮದ ವಸಂತಕುಮಾರ್ ಅ.4ರಂದು ಖಾಸಗಿ ಕೆಲಸದ ನಿಮಿತ್ತ ತಿಪ್ಪೇಸ್ವಾಮಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೆಲಸ ಮುಗಿದ ಮೇಲೆ ವಾಪಸ್ಸು ಬರುವಾಗ ಸ್ನೇಹಿತ ತಿಪ್ಪೇಸ್ವಾಮಿ ಬಸ್ ನಿಲ್ದಾಣದ ಬಳಿ ಮೂರ್ಛೆ ಹೋಗಿದ್ದರು. ಸ್ನೇಹಿತ ವಸಂತಕುಮಾರ್ ಇದನ್ನು ಗಮನಿಸಿದ್ದರಾದರೂ, ತಿಪ್ಪೇಸ್ವಾಮಿ ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. 6 ದಿನಗಳಾದರೂ ತಿಪ್ಪೇಸ್ವಾಮಿ ಕಂಡುಬಾರದ ಹಿನ್ನೆಲೆಯಲ್ಲಿ ಅವರ ಕುಟುಂದವರು ಅ.9ರಂದು ವಸಂತಕುಮಾರ ಅವರು ತಿಪ್ಪೇಸ್ವಾಮಿಯನ್ನು ಕರೆದುಕೊಂಡು ಹೋಗಿದ್ದರೆಂದು ಆರೋಪಿಸಿ, ನಾಯಕನಹಟ್ಟಿಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ವಸಂತಕುಮಾರನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು. ಬಳಿಕ ವಸಂತಕುಮಾರನೊಂದಿಗೆ ಬೆಂಗಳೂರಿಗೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲಿಯೂ ಸುಳಿವು ಪತ್ತೆಯಾಗಲಿಲ್ಲ. ಮಂಗಳವಾರ ಮರಳಿ ಚಳ್ಳಕೆರೆಗೆ ಬಂದರು. ವಸಂತಕುಮಾರನ ಸ್ನೇಹಿತ, ಆಟೋ ಚಾಲಕ ನಾಗರಾಜ ಹಾಗೂ ಕಾಣೆಯಾದ ತಿಪ್ಪೇಸ್ವಾಮಿ ಸ್ನೇಹಿತ ಮಲ್ಲೇಶನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ಕಾಣೆಯಾಗಿದ್ದ ತಿಪ್ಪೇಸ್ವಾಮಿ ಬುಧವಾರ ಬೆಳಗ್ಗೆ ನಾಯಕನಹಟ್ಟಿಗೆ ಆಗಮಿಸಿದ್ದಾರೆ.
ತಿಪ್ಪೇಸ್ವಾಮಿ ಅವರನ್ನು ಚಳ್ಳಕೆರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ನೇಹಿತ ವಸಂತಕುಮಾರ್, ಮಲ್ಲೇಶ ಹಾಗೂ ನಾಗರಾಜನನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪತ್ರಕ್ಕೆ ಸಹಿ ಪಡೆದು ಮನೆಗೆ ಕಳುಹಿಸಿದ್ದಾರೆ. ಕಾಣೆಯಾಗಿದ್ದ ತಿಪ್ಪೇಸ್ವಾಮಿ ಮರಳಿ ಮನೆ ಸೇರಿದ್ದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ.