ಶೀಘ್ರ 92 ಸನ್ನಡತೆ ಕೈದಿಗಳ ಬಿಡುಗಡೆ

By Suvarna Web DeskFirst Published Feb 18, 2018, 10:16 AM IST
Highlights

ಬೆಂಗಳೂರಿನ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 92 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದು, ಶೀಘ್ರದಲ್ಲಿ ಹೊರಬರಲಿದ್ದಾರೆ. ರಾಜ್ಯಪಾಲರು ಕೈದಿಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಿರುವ ಕಡತ ನಾಲ್ಕು ದಿನಗಳ ಹಿಂದೆ ಗೃಹ ಇಲಾಖೆಗೆ ತಲುಪಿದೆ.

ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 92 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದು, ಶೀಘ್ರದಲ್ಲಿ ಹೊರಬರಲಿದ್ದಾರೆ. ರಾಜ್ಯಪಾಲರು ಕೈದಿಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಿರುವ ಕಡತ ನಾಲ್ಕು ದಿನಗಳ ಹಿಂದೆ ಗೃಹ ಇಲಾಖೆಗೆ ತಲುಪಿದೆ.

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಕೆಲವು ಮಾರ್ಗಸೂಚಿ ನಿಗದಿಪಡಿಸಿತ್ತು. ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) ಕಲಂ 433 ಎ ಪ್ರಕಾರ ಸುಪ್ರೀಂಕೋರ್ಟ್ ಆದೇಶದಂತೆ 2016 ರಲ್ಲಿ ರಾಜ್ಯ ಸರ್ಕಾರ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ನೂತನ ನಿಯಮವನ್ನು ಜಾರಿಗೆ ತಂದಿತ್ತು. ಅದರನ್ವಯ ಜೀವವಾಧಿ ಶಿಕ್ಷೆಗೆ ಒಳಪಟ್ಟ ಆರೋಪಿ 14 ವರ್ಷ ಕಠಿಣ ಶಿಕ್ಷೆಯನ್ನು ಹಾಗೂ ಮಹಿಳಾ ಆರೋಪಿ 10 ವರ್ಷ ಕಠಿಣ ಶಿಕ್ಷೆಯನ್ನು ಕಡ್ಡಾಯವಾಗಿ ಪೂರೈಸಬೇಕೆಂದು ಹೇಳಿತ್ತು.

ಅದರಂತೆ ಕೈದಿಗಳ ಪಟ್ಟಿಯನ್ನು ಸಿದ್ಧಪಡಿಸಿ 109 ಮಂದಿ ಕೈದಿಗಳ ಹೆಸರನ್ನು ಗೃಹ ಇಲಾಖೆಯು ಜ.17ರಂದೇ ಬಿಡುಗಡೆಗೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿತ್ತು. ಜ.26ರಂದು ಗಣರಾಜ್ಯೋತ್ಸವದ ದಿನ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು.

ಸರ್ಕಾರ ಕಳಿಸಿದ್ದ ಪಟ್ಟಿಯಲ್ಲಿ ಕೆಲವರು ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಹಾಗೂ 14 ವರ್ಷಗಳ ಶಿಕ್ಷಾವಧಿಯನ್ನು ಪೂರೈಸದೇ ಇರುವ ಕಾರಣದಿಂದ 17 ಮಂದಿಯ ಬಿಡುಗಡೆಗೆ ಒಪ್ಪಿಗೆ ರಾಜ್ಯಪಾಲರು ನೀಡಿಲ್ಲ. ಈಗ 92 ಮಂದಿಯ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ.

3 ಮಹಿಳೆಯರಿಗೆ ಬಿಡುಗಡೆ ಭಾಗ್ಯವಿಲ್ಲ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೂರು ಮಹಿಳೆಯರು ಹಾಗೂ ಧಾರವಾಡ ಕಾರಾಗೃಹದಲ್ಲಿರುವ ಓರ್ವ ಮಹಿಳೆಯ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಈ ನಾಲ್ವರು ಮಹಿಳೆಯರು ಬಿಡುಗಡೆಗೆ ಅರ್ಹರಲ್ಲ ಎಂದು ಹೇಳಿ ರಾಜ್ಯಪಾಲರು ತಿರಸ್ಕರಿಸಿದ್ದಾರೆ.

ಬೆಂಗಳೂರು ಕೇಂದ್ರ ಕಾರಾಗೃಹದ 31 ಕೈದಿಗಳು, ಬೆಳಗಾವಿ ಜೈಲಿನ 9, ಮೈಸೂರು ಜೈಲಿನ 16, ಬಳ್ಳಾರಿ ಕಾರಾಗೃಹದ 6, ಕಲಬುರಗಿ ಜೈಲಿನ 14, ವಿಜಯಪುರದ ಒಂಬತ್ತು ಹಾಗೂ ಧಾರವಾಡ ಜೈಲಿನ ಏಳು ಕೈದಿಗಳು ಬಿಡುಗಡೆ ಹೊಂದಲಿದ್ದಾರೆ. ಕಳೆದ ವರ್ಷದ ಡಿಸೆಂಬರ್ 12ರಂದು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 108 ಮಂದಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು.

click me!