
ಹೊನ್ನಾಳಿ (ನ.07): ರಾಜ್ಯದಲ್ಲಿ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸವನ್ನು ಮುಖ್ಯಮಂತ್ರಿ ಉದ್ದೇಶ ಪೂರ್ವಕವಾಗಿ ಪೊಲೀಸರ ಮೂಲಕ ಮಾಡಿಸುತ್ತಿದ್ದು ಮುಖ್ಯಮಂತ್ರಿಗಳ ಈ ಧೋರಣೆ ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸರ್ಕಾರ ನ.10 ರಂದು ಆಚರಿಸಲಿರುವ ಟಿಪ್ಪು ಜಯಂತಿಯನ್ನು ವಿರೋಧಿಸಿ ತಾಲೂಕು ಬಿಜೆಪಿ ಘಟಕದವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಕಳೆದ 60 ವರ್ಷಗಳಿಂದಲೂ ಕೋಮು ಸಂಘರ್ಷಕ್ಕೆ ಹೆಸರಾಗಿದ್ದು ಕೇವಲ ಅಲ್ಪಸಂಖ್ಯಾತರ ಮತಗಳಿಸುವ ಒಂದೇ ಉದ್ದೇಶದಿಂದ ಒಡೆದಾಳುವ ನೀತಿ ನುಸರಿಸುತ್ತಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳ ಮಾರಣ ಹೋಮ ನಡೆಯುತ್ತಿದ್ದು, ಹಿಂದೂ ಪರಸಂಘಟನೆಗಳನ್ನು ಹಕ್ಕಿಕ್ಕುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ದಸರಾ ಉತ್ಸವಕ್ಕೆ ಕೇವಲ ರೂ.10 ಕೋಟಿ ಖರ್ಚುಮಾಡಿ ಸಾಂತಿ ಭಂಗ ತರುವ ಟಿಪ್ಪು ಜಯಂತಿಗೆ ರೂ.18 ಕೋಟಿ ಬಿಡುಗಡೆಗೊಳಿಸಿ ರಾಜ್ಯದ ಜನರ ಭಾವನೆ ಕೆರಳಿಸಿದೆ. ಕೇವಲ ಅಧಿಕಾರಕ್ಕಾಗಿ ಜನತೆಯ ವಿರೋಧಕ್ಕೆ ಪ್ರತಿರೋಧ ನಿರ್ಧಾರ ಕೈಗೊಂಡ ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ. ಕೂಡಲೇ ಸರ್ಕಾರ ಇದನ್ನು ಸಮಗ್ರವಾಗಿ ಪರಿಶೀಲಿಸಿ ಜನತೆಯ ಭಾವನೆಗಳಿಗೆ ಗೌರವ ನೀಡಿ ಟಿಪ್ಪು ಜಯಂತಿ ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಪಡಿಸಿದರು.
ಜಿಪಂ ಸದಸ್ಯ ಎಂ.ಆರ್.ಮಹಶ್, ದೀಪಾಜಗದೀಶ್, ಸಿ.ಸುರೇಂದ್ರನಾಯ್ಕ, ವೀರಶೇಖರಪ್ಪ, ತಾ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ತಾಪಂ ಸದಸ್ಯ ಸಿ.ಆರ್. ಶಿವಾನಂದ, ತಾಪಂ ಸಾಮಾಜಿ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಎಲ್.ರಂಗಪ್ಪ, ಮರಿಕನ್ನಪ್ಪ, ತಿಪ್ಪೇಶ್, ಹನುಮಂತಪ್ಪ, ಮುಖಂಡರಾದ ದಿಡಗೂರು ಪಾಲಾಕ್ಷಪ್ಪ, ಜಗದೀಶ್, ತಾ.ಬಿಜೆಪಿ ಉಪಾಧ್ಯಕ್ಷ ಸಿದ್ದನಗೌಡ ಸರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ಟಿಪ್ಪ ಜಯಂತಿ ಆಚರಿಸುವ ಸರ್ಕಾರದ ನಿರ್ಧಾರ ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಹಿರೇಕಲ್ಮಠದಿಂದ ಪ್ರತಿಭಟನಾ ಮೆರವಣಿಗೆ ಹೊರಟಲು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳಾದ ಸಿಪಿಐ ಜೆ.ರಮೇಶ್, ಎಸ್.ಐ. ಕಾಡದೇವರ ಅವರು ಮೆರವಣಿಗೆ ನಡೆಸದಂತೆ ಪ್ರತಿಭಟ ನಾಕಾರರನ್ನು ತಡೆದಾಗ ಕೆಲ ಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎನ್.ಜೆ. ನಾಗರಾಜ್ ಮಾತನಾಡಿ, ಸರ್ಕಾರ ಟಿಪ್ಪು ಜಯಂತಿ ಆಚರಿಸುವಂತೆ ಮಾಡಿರುವ ಆದೇಶದಂತೆ ತಾಲೂಕು ಅಡಳಿತ ಹಾಗೂ ಅಧಿಕಾರಿ ವರ್ಗದವರು ಜಯಂತಿ ಆಚರಣೆಗೆ ಮುಂದಾಗಿದ್ದು,ಇಲ್ಲಿ ಯಾವುದೇ ಮೆರವಣಿಗೆ ನಡೆಸಲು ಆವಕಾಶವಿರುವುದಿಲ್ಲ ಎಂದು ಮನವರಿಕೆ ಮಾಡಿ ನಂತರ ಪ್ರತಿಭ ಟನಾಕಾರರದಿಂದ ಮನವಿ ಸ್ವೀಕಸಿದರು.