
ಮೂಡಿಗೆರೆ (ನ.21): ಶ್ರೀ ರಾಮಸೇನೆ ವತಿಯಿಂದ ದತ್ತಮಾಲೆ ಅಭಿಯಾನಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಮತ್ತು ಬಣಕಲ್ ಪಟ್ಟಣಗಳಲ್ಲಿ ಸಂಜೆ 4 ರಿಂದ 8 ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಸ್ವತಃ ಮುಚ್ಚಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಶ್ರೀ ರಾಮಸೇನೆ ವತಿಯಿಂದ ದತ್ತಮಾಲೆ ಅಭಿಯಾನ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಭಾಗದಿಂದ ಚಿಕ್ಕಮಗಳೂರಿಗೆ ಬಂದಿರುವ ದತ್ತ ಮಾಲಾಧಾರಿಗಳು ಹಿಂತಿರುಗುವಾಗ ಶಾಂತಿ ಸ್ಥಾಪನೆಗಾಗಿ ಮುನ್ನೆಚ್ಚರಿಕೆಯಿಂದ ಇಲಾಖೆ ಈ ಕ್ರಮ ಕೈಗೊಂಡಿತು.
ಆದರೆ, ದತ್ತಮಾಲಾಧಾರಿಗಳು ತೆರಳುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದ್ದು ಸರಿಯಲ್ಲ. ಯಾವುದೋ ಸಂಘಟನೆಗಳು ಬಂದ್‌ಗೆ ಕರೆ ನೀಡಿದಂತೆ ಬಂದ್ ನಡೆಸಿದ್ದು ಕಾನೂನಿನ ಉಲ್ಲಂಘನೆಯಾಗಿದೆ. ಪೊಲೀಸರು ರಕ್ಷಣೆ ಒದಗಿಸಬೇಕೇ ಹೊರತು, ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸುವುದು ಗೂಂಡಾಗಿರಿಯಂತಾಗುತ್ತದೆ. ಇಂತಹ ಕೃತ್ಯಗಳು ಎಂದಿಗೂ ನಡೆಯಬಾರದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ದತ್ತಮಾಲಾಧಾರಿಗಳು ಕರಾವಳಿಯಿಂದ ಚಿಕ್ಕಮಗಳೂರಿಗೆ ಒಟ್ಟು ೨೬ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಅವರು ವಾಪಾಸ್ ಮರಳುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲಿಸರು ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ಮಾರ್ಗವಾಗಿ ಬಣಕಲ್, ಕೊಟ್ಟಿಗೆಹಾರದ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳನ್ನು ಮುಚ್ಚಿಸಲಾಯಿತು.
ಶನಿವಾರ ರಾತ್ರಿಯಿಂದಲೇ ಪೊಲೀಸರು ಕೊಟ್ಟಿಗೆಹಾರದ ತಪಾಸಣಾ ಗೇಟ್‌ನಲ್ಲಿ ದತ್ತಮಾಲಾ ಪ್ರಯುಕ್ತ ಎಲ್ಲ ವಾಹನಗಳನ್ನು ಅದರ ಮಾಹಿತಿಯನ್ನು ಕಲೆ ಹಾಕಿ ತೀವ್ರ ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಆದರೆ ಭಾನುವಾರ ದತ್ತಮಾಲೆ ಕಾರ್ಯಕ್ರಮ ಮುಗಿದೊಡನೆ ವಾಪಾಸ್ ಮರಳುವಾಗ ಶಾಂತಿ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಂಜೆ ೪ರಿಂದ ೮ ಗಂಟೆವರೆಗೆ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ವಾಹನಗಳು ಹೋಗುವವರೆಗೂ ಈ ಭಾಗದ ಅಂಗಡಿಗಳು, ಹೋಟೆಲ್‌ಗಳು ಮುಚ್ಚಲಿವೆ ಎಂದು ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.