
ಚಿತ್ರದುರ್ಗ (ಅ.19): ಟರ್ಕಿ ದೇಶದ ರೂ.5 ಲಕ್ಷ ಮುಖಬೆಲೆಯುಳ್ಳ 96 ನೋಟುಗಳನ್ನು (ಲೀರಾ) ಮಾರಾಟ ಮಾಡಲು ಹಿರಿಯೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದ ಆಂಧ್ರ ಮೂಲದ ನಾಲ್ವರನ್ನು ಪೊಲೀಸರು ವಶಕ್ಕೆ
ಪಡೆದು ಅವರಿಂದ ರೂ.104.16 ಕೋಟಿ ಮೌಲ್ಯದ ಟರ್ಕಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಟರ್ಕಿ ದೇಶದಲ್ಲಿ ಚಲಾವಣೆಯಲ್ಲಿ ಇಲ್ಲದ ನೋಟುಗಳನ್ನು ಚಲಾವಣೆಯಲ್ಲಿರುವ ನೋಟುಗಳೆಂದು ನಂಬಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಜಾಲದ ಮಾಹಿತಿ ಪಡೆದ ಪೊಲೀಸರು ಹೋದಾಗ ತೆಲಂಗಾಣದ
ಕರವೇನ ಗ್ರಾಮದ ಚನ್ನಕೇಶವರೆಡ್ಡಿ, ಆಂಧ್ರದ ನಂದ್ಯಾಲದ ಯಶೋಧಾ ರಾವ್, ನಿರ್ಮಲ ನಗರದ ಪಿ. ಹರೀಶ ಬಾಬು, ಕರ್ನೂಲಿನ ಪಿ. ಭೀಮೇಶ ರೆಡ್ಡಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿಗಳ ಬಳಿಯಿದ್ದ ಸ್ವಿಫ್ಟ್ ಡಿಜೈರ್ ಕಾರು, 5 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರದ ನಂದ್ಯಾಲ ಜಿಲ್ಲೆಯ ರಾಯುಡು ಎಂಬುವರಿಂದ ಈ ನೋಟುಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ರಾಯುಡುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ತಿಳಿಸಿದರು.
ಹಿರಿಯೂರು ಪಿಎಸ್‌ಐ ಇ. ಶಿವಕುಮಾರ್, ವೃತ್ತ ನಿರೀಕ್ಷಕ ಸುದರ್ಶನ್, ಡಿವೈಎಸ್ಪಿ ದುಗ್ಗಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.