ಧಾರವಾಡ: ಬಾರ್‌ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಹೋರಾಟ

Published : Oct 20, 2019, 07:22 AM IST
ಧಾರವಾಡ: ಬಾರ್‌ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಹೋರಾಟ

ಸಾರಾಂಶ

ಬಾರ್‌ ಅನುಮತಿ ರದ್ದುಗೊಳಿಸುವಂತೆ ಆಗ್ರಹಿಸಿ ಆದಿತ್ಯ ಪಾರ್ಕ್ ಬಡಾವಣೆಯ ನಿವಾಸಿಗಳ ಸಂಘದಿಂದ ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ| ಸುಶಿಕ್ಷಿತ, ಪ್ರಜ್ಞಾವಂತರ ಹಾಗೂ ಅಧಿಕಾರಿ ವರ್ಗದವರು ಇಲ್ಲಿ ವಾಸಿಸುತ್ತಿದ್ದಾರೆ| ಶಾಂತಿನಿಕೇತನ ನಗರದಲ್ಲಿ ಕರಿಯಮ್ಮ ದೇವಸ್ಥಾನವು ಹತ್ತಿರದಲ್ಲಿಯೇ ಇದೆ| ಇಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ, ಹಬ್ಬ-ಹರಿದಿನದಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ| 

ಧಾರವಾಡ(ಅ.19): ಇಲ್ಲಿನ ಕೆಲಗೇರಿ ರಸ್ತೆಯಲ್ಲಿನ ಆದಿತ್ಯ ಪಾರ್ಕ್ ಬಡಾವಣೆಯಲ್ಲಿ ಆರಂಭಿಸುತ್ತಿರುವ ಬಾರ್‌ ಅನುಮತಿ ರದ್ದುಗೊಳಿಸುವಂತೆ ಆಗ್ರಹಿಸಿ ಆದಿತ್ಯ ಪಾರ್ಕ್ ಬಡಾವಣೆಯ ನಿವಾಸಿಗಳ ಸಂಘದಿಂದ ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಆದಿತ್ಯ ಪಾರ್ಕ್ ಹಾಗೂ ಸುತ್ತಲಿನ ಬಡಾವಣೆಗಳಾದ ಶಾಂತಿನಿಕೇತನ ನಗರ, ಲೋಟಸ್‌ ಲೇಔಟ್‌ ಹಾಗೂ ಇದಕ್ಕೆ ಹೊಂದಿಕೊಂಡು ಇನ್ನೂ ಅನೇಕ ಬಡಾವಣೆಗಳಿವೆ. ಸುಶಿಕ್ಷಿತ, ಪ್ರಜ್ಞಾವಂತರ ಹಾಗೂ ಅಧಿಕಾರಿ ವರ್ಗದವರು ಇಲ್ಲಿ ವಾಸಿಸುತ್ತಿದ್ದಾರೆ. ಶಾಂತಿನಿಕೇತನ ನಗರದಲ್ಲಿ ಕರಿಯಮ್ಮ ದೇವಸ್ಥಾನವು ಹತ್ತಿರದಲ್ಲಿಯೇ ಇದೆ. ಇಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ, ಹಬ್ಬ-ಹರಿದಿನದಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಸುತ್ತಲಿನ ಮತ್ತು ದೂರದ ಬಡಾವಣೆಗಳ ನೂರಾರು ಭಕ್ತರು, ಅದರಲ್ಲಿಯೂ ಮಹಿಳೆಯರು ಆಗಮಿಸುತ್ತಾರೆ. ಸುಮಾರು ಹದಿನೈದು ವರ್ಷಗಳಿಂದ ಇಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದರೂ ರಾತ್ರಿ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.

ಆದರೆ, ಈಗ ಈ ಬಡಾವಣೆಯ ಪಕ್ಕದಲ್ಲಿಯೇ ಅನಧಿಕೃತ ಕಟ್ಟಡದಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಪ್ರಾರಂಭವಾಗುವುದರಿಂದ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಅಲ್ಲದೇ ಈ ಬಾರ್‌ನ ಕೂಗಳತೆ ದೂರದಲ್ಲಿ ಸರ್ಕಾರದ, ಪರಿಶಿಷ್ಟಜಾತಿ ಮತ್ತು ಪಂಗಡದ ಬಾಲಕಿಯರ ವಸತಿ ನಿಲಯ, ಇಸ್ಲಾಂ ಧರ್ಮದವರ ಈದ್ಗಾ ಮೈದಾನ ಹಾಗೂ ಸಮೀಪದಲ್ಲಿಯೇ ಗಣಪತಿ ಹಾಗೂ ಹನುಮಾನ ಮಂದಿರಗಳು ಇವೆ. ಈಗ ಬಾರ್‌ ಪ್ರಾರಂಭವಾಗುವುದರಿಂದ ಧಾರ್ಮಿಕ ಚಟುವಟಿಕೆಗೆ ತೊಂದರೆ, ಗಲಾಟೆಗಳು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಬಾರ್‌ ಅನುಮತಿ ರದ್ದುಪಡಿಸಿ, ಈ ಪ್ರದೇಶದಲ್ಲಿ ಶಾಂತಿಗೆ ಧಕ್ಕೆಯಾಗದಂತೆ ಕ್ರಮ ಕೈಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಮನವಿ ಮೂಲಕ ಕೇಂದ್ರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕ ಅಮೃತ ದೇಸಾಯಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಆದಿತ್ಯ ಪಾರ್ಕ್ ಬಡಾವಣೆಯ ಅಧ್ಯಕ್ಷ ಚನಬಸಪ್ಪ ಮರದ, ಪದಾಧಿಕಾರಿಗಳಾದ ಬಸವರಾಜ್‌ ಕಲ್ಯಾಣಪುರ, ಕೆ.ಎಂ. ತದ್ದೇವಾಡಿ, ಪಾಪು ಧಾರೆ, ಎಸ್‌.ಎಸ್‌. ಜಾಧವ್‌, ಶಿವು ಜಂಗಮನವರ, ಎಸ್‌.ಎಸ್‌. ಕೊಟಗಿ, ಮಂಜುನಾಥ ಹೆಬ್ಬಾರ, ಬಿ.ಎ. ಹೊಸಮನಿ, ಸಿ.ವಿ. ಹೊಸಮನಿ, ಜಿ.ಆರ್‌. ದುರಗಾಡಿ, ಆನಂದ ಉದ್ದಣ್ಣವರ ಇನ್ನಿತರರು ಇದ್ದರು.
 

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ