ಹುಬ್ಬಳ್ಳಿ: ಮಹಾನಗರದ ಅಂಗಡಿಗಳ ನಾಮಫಲಕ ಇನ್ಮುಂದೆ ಕನ್ನಡದಲ್ಲಿ!

By Web DeskFirst Published Oct 30, 2019, 10:08 AM IST
Highlights

ಕನ್ನಡವನ್ನು ಪ್ರಧಾನವಾಗಿಸುವಂತೆ ಮಹಾನಗರಪಾಲಿಕೆ ಆದೇಶ|ನವೆಂಬರ್‌ ಮೊದಲ ವಾರದೊಳಗೆ ಬಹುತೇಕ ಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ವ್ಯಾಪಾರಸ್ಥರಿಗೆ ತಿಳಿಸಲಾಗುತ್ತಿದೆ| ಈಗಾಗಲೇ ಇಂಗ್ಲಿಷ್‌, ಹಿಂದಿಯಲ್ಲಿರುವ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಅಳವಡಿಸಿ ಪ್ರದರ್ಶಿಸುವಂತೆ ಸೂಚನೆ ನೀಡಲಾಗುತ್ತಿದೆ|

ಹುಬ್ಬಳ್ಳಿ[ಅ.30]: ಮಹಾನಗರದಲ್ಲಿರುವ ಎಲ್ಲ ಅಂಗಡಿ-ಮುಂಗಟ್ಟುಗಳು, ಉದ್ದಿಮೆಗಳ ಹೆಸರು ಕನ್ನಡದಲ್ಲಿ ಪ್ರಧಾನವಾಗಿ ಇರುವಂತೆ ಕಡ್ಡಾಯಗೊಳಿಸಿ ಮಹಾನಗರಪಾಲಿಕೆ ಮಂಗಳವಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಸುತ್ತೋಲೆಯಂತೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಅಂಗಡಿ ಫಲಕಗಳನ್ನು ಕನ್ನಡೀಕರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಲಯಾಧಿಕಾರಿಗಳು ಹಾಗೂ ಅಲ್ಲಿನ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳ ಮೂಲಕ ಅಂಗಡಿಕಾರರಿಗೆ ಸೂಚನೆ ನೀಡುವ ಕಾರ್ಯ ನಡೆಯುತ್ತಿದೆ. ನವೆಂಬರ್‌ ಮೊದಲ ವಾರದ ಒಳಗಾಗಿ ಬಹುತೇಕ ಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ವ್ಯಾಪಾರಸ್ಥರಿಗೆ ತಿಳಿಸಲಾಗುತ್ತಿದೆ. ಈಗಾಗಲೇ ಇಂಗ್ಲಿಷ್‌, ಹಿಂದಿಯಲ್ಲಿರುವ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಅಳವಡಿಸಿ ಪ್ರದರ್ಶಿಸುವಂತೆ ಸೂಚನೆ ನೀಡಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಮಹಾನಗರದಲ್ಲಿನ ಎಲ್ಲ ಉದ್ದಿಮೆ, ಹೊಟೆಲ್‌, ಲಾಡ್ಜ್‌, ಕಲ್ಯಾಣ ಮಂಟಪಗಳ ಮಾಲೀಕರು ಹಾಗೂ ಎಲ್ಲ ವ್ಯಾಪಾರಸ್ಥರು ಕೆಎಂಸಿ ಕಾಯ್ದೆ 1976ರ ಅನ್ವಯ ಕಲಂ 343, 353, 354ರ ಅನ್ವಯ ತಮ್ಮ ಉದ್ದಿಮೆಯ ಶಿರೋನಾಮೆಯನ್ನು ಕನ್ನಡದಲ್ಲಿ ಅಳವಡಿಸಿ ಪ್ರದರ್ಶಿಸಬೇಕು ಎಂದು ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.

ನಗರದ ಕೊಪ್ಪಿಕರ ರಸ್ತೆ, ದುರ್ಗದ ಬೈಲು, ಜನತಾ ಬಜಾರ್‌ನಲ್ಲಿ ಹಲವು ಅಂಗಡಿಗಳು ಕೇವಲ ಹಿಂದಿ, ಇಂಗ್ಲಿಷ್‌ನಲ್ಲಿ ತಮ್ಮ ಶಿರೋನಾಮೆಯನ್ನು ಅಳವಡಿಸಿವೆ. ಸಣ್ಣಪುಟ್ಟ ಅಂಗಡಿಗಳಲ್ಲದೆ, ಶಾಪಿಂಗ್‌ ಮಾಲ್‌, ಮಳಿಗೆಗಳ ಸಂಕೀರ್ಣಗಳು ಇಂಗ್ಲಿಷ್‌ನಲ್ಲಿ ಬೋರ್ಡ್‌ಗಳನ್ನು ಅಳವಡಿಸಿವೆ. ಇವು ಮುಂದಿನ ಒಂದು ವಾರದಲ್ಲಿ ಬದಲಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಕುರಿತು ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು, ನವೆಂಬರ್‌ ಮೊದಲ ವಾರದೊಳಗಾಗಿ ಹೆಸರನ್ನು ಕನ್ನಡದಲ್ಲಿ ಬರೆಸುವಂತೆ ತಿಳಿಸಲಾಗುತ್ತಿದೆ. ಈ ಕುರಿತು ಅಂಗಡಿಕಾರರ ಮನವೊಲಿಸುವ, ಕಟ್ಟುನಿಟ್ಟಾಗಿ ಸೂಚಿಸುವ ಕಾರ್ಯ ಮಾಡಲಾಗುವುದು. ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡ ಬಲ್ಲವರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ ಭಾಷಾ ಬೆಳವಣಿಗೆಗೆ ಪೂರಕವಾಗಲಿದ್ದು, ಸರ್ಕಾರದ ಸೂಚನೆಯಂತೆ ಆದೇಶ ಹೊರಡಿಸಲಾಗಿದೆ ಎಂದರು.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು, ಮಹಾನಗರದ ಎಲ್ಲ ಅಂಗಡಿ ಫಲಕಗಳು ಕನ್ನಡದಲ್ಲಿ ಇರುವಂತೆ ಅಂಗಡಿಕಾರರಿಗೆ ಎಲ್ಲ ವಲಯಗಳ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳ ಮೂಲಕ ತಿಳಿಸಲಾಗುತ್ತಿದೆ. ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಈ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

click me!