
ಮಯೂರ ಹೆಗಡೆ
ಹುಬ್ಬಳ್ಳಿ[ಅ.30]: ಸಿಆರ್‌ಎಫ್ ಅನುದಾನದಲ್ಲಿ ವಿದ್ಯಾನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ ತೋಳನಕೆರೆವರೆಗೆ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟೆಂಡರ್‌ಶ್ಯೂರ್ ರಸ್ತೆ ಇನ್ನೂ ಉದ್ಘಾಟನೆಗೊಂಡಿಲ್ಲ. ಆದರೆ, ಅದಕ್ಕೂ ಮುನ್ನವೇ, ಈ ರಸ್ತೆಯ ವಿಶೇಷ ವ್ಯವಸ್ಥೆಗಳು ಅಕ್ಷರಸ್ಥರಿಂದಲೇ ಹದಗೆಡುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ.
ಹುಬ್ಬಳ್ಳಿಯಲ್ಲಿಯೆ ಸುಸಜ್ಜಿತ ರಸ್ತೆ ಎನಿಸಿಕೊಂಡ ಇದರ ಇಕ್ಕೆಲದಲ್ಲಿ 2 ಕಿ.ಮೀ.ವರೆಗೆ ಸೈಕಲ್‌ಪಾತ್ ನಿರ್ಮಿಸಲಾಗಿದೆ. ನಿತ್ಯ ನಸುಕಿನಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯರು ಸೇರಿ ಇಲ್ಲಿನ ಪಾತ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಆದರೆ, ಹಲವರು ರಾತ್ರಿ ಈ ಪಾತ್‌ನ ಮಧ್ಯ ಬೈಕ್, ಮನೆ ಅವರಣ ಪಾತ್‌ನಲ್ಲಿ ಕಾರನ್ನು ನಿಲ್ಲಿಸುತ್ತಾರೆ. ಹೀಗಾಗಿ ಸೈಕ್ಲಿಂಗ್ ಮಾಡುವುದೇ ಕಷ್ಟವಾಗಿದೆ. ಅಲ್ಲದೆ, ಉಳಿದ ವೇಳೆ ಇಲ್ಲಿ ಬೇಕಾಬಿಟ್ಟಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂಬಂಧ ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನಿಂದ ಕಳೆದ ಸೆ. 29ರಂದು ಸೈಕಲ್ ಪಾತ್ ರಕ್ಷಿಸಿ ಎಂದು ಅಭಿಯಾನ ನಡೆಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಿತ್ಯ ಇಲ್ಲಿ ವಾಹನ ನಿಲ್ಲಿಸುವವರಿಗೆ ತಿಳಿ ಹೇಳುತ್ತಿದ್ದಾರೆ. ಸಚಿವ ಪ್ರಹ್ಲಾದ ಜೋಶಿ ಗಮನಕ್ಕೆ ಬಂದು ಅವರ ಸೂಚನೆ ಮೇರೆಗೆ ಒಂದೆರಡು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಹ ಪಾರ್ಕಿಂಗ್ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದಾವುದೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಸ್ತುತ ಈ ಬಗ್ಗೆ ಕರಪತ್ರ ಹಂಚಲು ಮುಂದಾಗಿದ್ದೇವೆ ಎಂದು ಕ್ಲಬ್‌ನ ಅನೀಶ್ ಖೋಜೆ ತಿಳಿಸಿದರು.
19 ಕಡೆ ನೋ ಪಾರ್ಕಿಂಗ್:
ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ನೋ ಪಾರ್ಕಿಂಗ್‌ಗೆ 19 ಸ್ಥಳಗಳನ್ನು ಗುರುತಿಸಿದ್ದು, ಇಲ್ಲಿ ನೋ ಪಾರ್ಕಿಂಗ್ ಬೋರ್ಡ್‌ನ್ನು ಶೀಘ್ರದಲ್ಲೇ ಅಳವಡಿಸಲಿದ್ದಾರೆ. ಬಳಿಕ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳ ನಿಗದಿಪಡಿಸಿ ಫಲಕ ಅಳವಡಿಸಲಾಗುವುದು ಎಂದು ಉತ್ತರ ಸಂಚಾರಿ ಠಾಣೆ ಪೊಲೀಸರು ತಿಳಿಸಿದರು. 35 ಪಾರ್ಕಿಂಗ್ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ.
ಸ್ಥಳ ಗುರುತಿಸಿರಲಿಲ್ಲ
ಟೆಂಡರ್‌ಶ್ಯೂರ್ ರಸ್ತೆ ನೀಲನಕ್ಷೆ ರಚನೆ ವೇಳೆ ಪಾರ್ಕಿಂಗ್‌ಗೆ ಅಗತ್ಯ ಸ್ಥಳ ಗುರುತು ಮಾಡದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಮೊದಲೇ ಪಾರ್ಕಿಂಗ್-ನೋ ಪಾರ್ಕಿಂಗ್ ಸ್ಥಳ ಗುರುತಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂಬುದು ಸ್ಥಳೀಯರ ವಾದ.
ಡ್ರೈನೇಜ್ ಪೀಕಲಾಟ
ಟೆಂಡರ್‌ಶ್ಯೂರ್ ರಸ್ತೆಯಲ್ಲಿ ಪೈಪ್‌ಲೈನ್, ವೈರಿಂಗ್ ಕನೆಕ್ಷನ್‌ಗಾಗಿ ಅಗೆಯಲು ಅವಕಾಶವಿಲ್ಲ. ಇದಕ್ಕಾಗಿ ರಸ್ತೆ ನಿರ್ಮಾಣದ ವೇಳೆಯೇ ಡಕ್ ನಿರ್ಮಿಸಲಾಗಿದ್ದು, ಇಲ್ಲಿಯೆ ನೀರು, ವಿದ್ಯುತ್, ವೈರ್ ಕೇಬಲ್‌ಗಳು ಹೋಗುವಂತೆ ಮಾಡಲಾಗಿದೆ. ಆದರೆ, ಕಾಮಗಾರಿ ವೇಳೆ ಅಪಾರ್ಟ್‌ಮೆಂಟ್, ಮನೆ, ವಾಣಿಜ್ಯ ಸಂಕೀರ್ಣಗಳಿಗೆ ಡ್ರೈನೇಜ್ ಕನೆಕ್ಷನ್‌ಗಳನ್ನು ಈಗಲೆ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಹಲವರು ಇದಕ್ಕೆ ಸ್ಪಂದಿಸಿಲ್ಲ. ಆದರೆ, ಈಗಿದು ಪೀಕಲಾಟ ತಂದಿಟ್ಟಿದೆ. ರಸ್ತೆ ಅಗೆಯುವಂತೆಯೂ ಇಲ್ಲ, ಚರಂಡಿ ಕನೆಕ್ಷನ್ ನೀಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಕೆಲವರು ರಸ್ತೆಯಂಚಿನ ಒಳಚರಂಡಿಗೆ ಕನೆಕ್ಷನ್ ನೀಡುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಶಿಕ್ಷಣ ಪಡೆದ ಪ್ರಜ್ಞಾವಂತರು ಎನಿಸಿಕೊಂಡವರೇ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ಪಾರ್ಕಿಂಗ್ ಮಾಡುವುದು ಬೇಸರದ ಸಂಗತಿ. ಮುಂದೆ ಸ್ಮಾರ್ಟ್ ಸಿಟಿಯಡಿ ಪಿಬಿಎಸ್ ಯೋಜನೆ ಜಾರಿಯಾದ ಬಳಿಕವೂ ಇದೇ ರೀತಿಯಾದರೆ ಸಮಸ್ಯೆ. ಸಂಚಾರಿ ಪೊಲೀಸರು, ಪಾಲಿಕೆ ಈ ಕುರಿತು ಕಠಿಣ ಕ್ರಮ ಕೈಗೊಳ್ಳಲಿ ಎಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಇವೆಂಟ್ ಚೇರ್‌ಮನ್ ಅನೀಶ ಖೋಜೆ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರ ಸಂಚಾರಿ ಠಾಣೆ ಪಿಐ ರತನಕುಮಾರ ಜೀರಗ್ಯಾಳ ಅವರು, ಟೆಂಡರ್‌ಶ್ಯೂರ್ ರಸ್ತೆಯಲ್ಲಿ 19 ಸ್ಥಳಗಳನ್ನು ನೋ ಪಾರ್ಕಿಂಗ್ ಎಂದು ಗುರುತಿಸಲಾಗಿದ್ದು, ಶೀಘ್ರ ಇಲ್ಲಿ ಬೋರ್ಡ್‌ಗಳನ್ನು ಅಳವಡಿಸಲಾಗುವುದು. ಸೈಕ್ಲಿಂಗ್ ಪಾತ್‌ನಲ್ಲಿ ಪಾರ್ಕಿಂಗ್ ಮಾಡದಂತೆ ಈಗಾಗಲೇ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.