
ಅಣ್ಣಿಗೇರಿ[ಅ.25]: ಅತಿವೃಷ್ಟಿಯಿಂದ ಹೆಚ್ಚು ನಷ್ಟ ಅನುಭವಿಸಿದ್ದು ನವಲಗುಂದ ಕ್ಷೇತ್ರ. ಆದರೆ ಈವರೆಗೂ ಪರಿಹಾರವನ್ನು ಸಮರ್ಪಕವಾಗಿ ವಿತರಿಸಿಲ್ಲ ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಆರೋಪಿಸಿದ್ದಾರೆ.
ಅಣ್ಣಿಗೇರಿ ತಾಲೂಕಿನ ಶಲವಡಿ, ನಾವಳ್ಳಿ, ಕಿತ್ತೂರು, ಅಡ್ನೂರು, ತುಪ್ಪದ ಕುರಹಟ್ಟಿ, ಕನ್ನೂರು, ಬೋಗಾನೂರು ಸೇರಿದಂತೆ ಮತ್ತಿತರರ ಗ್ರಾಮಗಳಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಳೆಯಿಂದಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಕ್ಷೇತ್ರದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳು ಬಿದ್ದಿವೆ. ಇದರಿಂದ ಬಡವರು ವಾಸಿಸಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಇನ್ನು ರೈತರು ಬೆಳೆದ ಈರುಳ್ಳಿಯೆಲ್ಲ ಕೊಚ್ಚಿ ಹೋಗಿದೆ. ಈರುಳ್ಳಿ ಬೆಳೆದ ರೈತರಿಗೆ ಈ ಸಲ ಕಣ್ಣೀರೇ ಗತಿ ಎಂಬಂತಾಗಿದೆ. ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಸಮರ್ಪಕ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಯರನಹಳ್ಳ, ಸವುಳಹಳ್ಳ, ಗುಂಡೇನಹಳ್ಳ, ಬೆಣ್ಣೆಹಳ್ಳ, ತುಪ್ಪರಿಹಳ್ಳ ಮುಂತಾದ ಸಣ್ಣಪುಟ್ಟಹಳ್ಳ ಮತ್ತು ನಾಲಾಗಳಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಮೆಣಸಿನಕಾಯಿ, ಹತ್ತಿ, ಶೇಂಗಾ, ಹೆಸರು, ಜೋಳ ಮುಂತಾದ ಬೆಳೆಗಳು ಹಾಳಾಗಿವೆ. ಕೂಡಲೇ ಸರ್ಕಾರ ಬೆಳೆ ಹಾನಿ ಪರಿಹಾರ ಘೋಷಿಸಬೇಕು. ನಾವಳ್ಳಿ ಗ್ರಾಮದಲ್ಲಿನ ಸೇತುವೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಒಪ್ಪಿಗೆ ನೀಡಿದ್ದಾಗಿದೆ. ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಡಿ.ಎಂ. ಶಲವಡಿ, ಶಶಿ ಮಾಸ್ತಿ, ಮೋದಿನಸಾಬ, ಕುಬೇರಪ್ಪ ತಿರ್ಲಾಪೂರ, ಹನುಮಪ್ಪ ನೀರಲಕೇರಿ, ಮೌಲಾಸಾಬ ವೈದ್ಯ, ಅಶೋಕ ಮಾಸ್ತಿ, ನಾರಾಯಣ ಸಾಸ್ವಿಹಳ್ಳಿ, ಶೇಖಣ್ಣ ಕಡ್ಲಿ, ಗುರಪ್ಪ ಮಣಕವಾಡ, ಹನುಮಂತಪ್ಪ ದೊಡ್ಡಮನಿ, ಯೋಗೇಶ ಛಲವಾದಿ, ಮುತ್ತು ಸಾಸ್ವಿಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.