ಹುಬ್ಬಳ್ಳಿ: ಎರಡು ತಿಂಗಳಿಂದ ಅರ್ಧ ಬಿದ್ದ ಮನೆಯಲ್ಲಿ ವೃದ್ಧೆ ಏಕಾಂಗಿ ವಾಸ!

By Web DeskFirst Published Oct 24, 2019, 3:02 PM IST
Highlights

ಎರಡೂವರೆ ತಿಂಗಳಿಂದ ಮುರುಕು ಮನೆಯಲ್ಲಿ ವಾಸವಾಗಿರುವ ವೃದ್ಧೆ| ಕಿರೇಸೂರಿನ ರಾಯನಗೌಡರ ಪ್ಲಾಟ್‌ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ವೃದ್ಧೆ| ಮೂಲತಃ ಈಕೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಊರಿನವಳು| ಈಕೆಗೆ ಮದುವೆಯಾದ ಬಳಿಕ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ತಲಾಖ್ ಕೊಟ್ಟ ಗಂಡ| 

ಶಿವಾನಂದ ಗೊಂಬಿ 

ಹುಬ್ಬಳ್ಳಿ[ಅ.24]: ‘ಯಪ್ಪಾ ಮೊನ್ನೆ ಮಳಿಯಾದಾಗ ನಾ ಸತ್ತ ಹೋಗ್ತಿದ್ದೆ.. ನಮ್ ಓಣಿಗ್ಯಾನವರೂ ಹಳ್ಳಾ ಬಂದೈತಿ ಹೊರಗ ಬಾ ಅಂತ ನನ್ ಕರದ್ರು, ಹೊರಗ ಬಂದೆ. ಹೀಂಗ ಹೊರಗ ಬಂದೆ ನೋಡು ಹಂಗ ಮನಿ ಗ್ವಾಡಿ ದೊಪ್ಪಂತ ಬಿತ್ತು'! ಇದು ತಾಲೂಕಿನ ಕಿರೇಸೂರು ಗ್ರಾಮದಲ್ಲಿನಕಳೆದ ಎರಡೂವರೆ ತಿಂಗಳಿಂದ ಮುರುಕು ಮನೆಯಲ್ಲಿ ವಾಸವಾಗಿರುವ ಗೂಡುಮಾ ಮುಲ್ಲಾನವರ (60) ಎರಡು ದಿನಗಳ ಹಿಂದೆ ಸುರಿದ ಮಳೆಯ ಅನುಭವದ ಚಿತ್ರಣ. 

ಈ ಮಾತು ಹೇಳುತ್ತಲೇ ಆವತ್ತಿನ ಮಳೆಯ ಅಬ್ಬರವನ್ನು ನೆನಸಿಕೊಂಡು ಕಣ್ಣೀರಾದರು. ಕಿರೇಸೂರಿನ ರಾಯನಗೌಡರ ಪ್ಲಾಟ್‌ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿದ್ದಾರೆ ಈ ವೃದ್ಧೆ. ಹಾಗೆ ನೋಡಿದರೆ ಈಕೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಊರಿನವಳು. ಈಕೆಗೆ ಮದುವೆಯಾದ ಬಳಿಕ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಗಂಡ ಈಕೆಗೆ ತಲಾಖ್ ಕೊಟ್ಟಿದ್ದಾನೆ. ಈಕೆಯ ತವರು ಮನೆಯೂ ತಾಳಿಕೋಟೆಯೇ. ಗಂಡ ಬಿಟ್ಟು ಬೇರೆ ಮದುವೆಯಾದ ಮೇಲೆ ಈಕೆಯ ಒಬ್ಬನೇ ತಮ್ಮ ತಮ್ಮೊಂದಿಗೆ ಇರು ಎಂದು ಒತ್ತಾಯಿಸಿದ್ದಾನೆ. ಆದರೆ ತನ್ನನ್ನು ಬಿಟ್ಟಗಂಡನ ಎದುರು ಬದುಕಿ ತೋರಿಸಬೇಕೆಂಬ ಹಠ, ಸ್ವಾಭಿಮಾನ ಅವಳನ್ನು ಅಲ್ಲಿ ಇರಲು ಬಿಟ್ಟಿಲ್ಲ. ಹೇಗಾದರೂ ಮಾಡಿ ನನ್ನ ರೊಟ್ಟಿಯನ್ನು ನಾನೇ ಸಂಪಾದಿಸಬೇಕು. ಅದು ಗಂಡನಿದ್ದ ಊರಲ್ಲೇ ಇದ್ದರೆ ಮನಸಿಗೆ ಬೇಸರವಾಗುತ್ತೆ ಎಂದುಕೊಂಡು ತಮ್ಮನಿಗೆ ಹೇಳಿ ಊರು ಬಿಟ್ಟಿದ್ದಾಳೆ. 

ಉದ್ಯೋಗ ಅರಸುತ್ತಾ ಕಿರೇಸೂರಿಗೆ ಬಂದು ನೆಲೆಸಿದ್ದಾಳೆ. ಕಿರೇಸೂರ ಹೊಲಗಳಲ್ಲಿ ಕೃಷಿ ಕಾರ್ಮಿಕಳಾಗಿ ದುಡಿಯುತ್ತಾ ಜೀವ ಸವಿದಿದ್ದಾಳೆ. ಈಕೆಯ ಪರಿಸ್ಥಿತಿ ನೋಡಿ ಮಾಲೀಕರು ರಾಯನಗೌಡ ಪ್ಲಾಟ್‌ನಲ್ಲಿಈಕೆಗೊಂದು ಸಣ್ಣ ಜಾಗ ನೀಡಿದ್ದಾರೆ. ಅಲ್ಲೇಸಣ್ಣದೊಂದು ತಟ್ಟಿಮನೆ ಕಟ್ಟಿಕೊಂಡು ಆಗಿನಿಂದ ಬದುಕು ಸಾಗಿಸುತ್ತಿದ್ದಾಳೆ. 

ಮುರುಕು ಮನೆಯಲ್ಲೇ ವಾಸ: 

ಕಳೆದ ಎರಡೂವರೆ ತಿಂಗಳ ಹಿಂದೆ ಸುರಿದ ಮಳೆಗೆ ಈಕೆಯ ತಟ್ಟಿ ಮನೆಯ ಒಂದು ಗೋಡೆ ಬಿದ್ದಿತ್ತು. ಆಗಿನಿಂದ ಮುರುಕು ಮನೆಯಲ್ಲೇ ಜೀವನ ಸಾಗಿಸಿದ್ದಾಳೆ. ಮಳೆ ಬಂದರೆ ಸಾಕು ಬಯಲಲ್ಲೇ ನಿಂತ ಅನುಭವ. ಅಂಥ ಮನೆಯಲ್ಲೇ ಹಾಗೋ ಹೀಗೋ ಮಾಡಿ ಎರಡೂವರೆ ತಿಂಗಳು ಕಳೆದಿದ್ದಾಳೆ. ಇದೀಗ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಪ್ಲಾಟ್‌ನ ಪಕ್ಕದಲ್ಲಿ ಹರಿದಿರುವ ನೀರಗಿ ಹಳ್ಳ ಉಕ್ಕೇರಿದೆ. ಪರಿಣಾಮ ಪ್ಲಾಟ್‌ನಲ್ಲಿನ ಎಲ್ಲ ಮನೆಗಳಿಗೂ ನೀರು ನುಗ್ಗಿದೆ. ಈಕೆಯ ಮನೆಯನ್ನು ಸುತ್ತುವರಿದಿದೆ. ಇನ್ನು ಈ ಮನೆಯೂ ಬೀಳುತ್ತದೆ ಎಂದುಕೊಂಡು ನೆರೆಹೊರೆಯವರೇ ಗೂಡುಮಾಳನ್ನು ಹೊರಗೆ ಕರೆದು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಈಕೆ ಹೊರಬರುತ್ತಿದ್ದಂತೆ ಈಕೆಯ ತಟ್ಟಿನ ಗುಡಿಸಲಿನ ಹಿಂಬದಿಯ ಗೋಡೆಯೂ ನೆಲಕಚ್ಚಿದೆ. ಒಂದು ವೇಳೆ ಇನ್ನೈದು ನಿಮಿಷ ಈಕೆ ಅದೇ ಮನೆಯಲ್ಲಿದ್ದರೆ ಈಕೆ ಜೀವಂತ ಉಳಿಯುತ್ತಿರಲಿಲ್ಲ. ಇನ್ನು ಮುರುಕು ಮನೆಗೆ ಹಿಂಬದಿಗೆ ನೆರೆ ಹೊರೆಯವರೇ ತಾಡಪತ್ರಿ ಕಟ್ಟಿಕೊಟ್ಟಿದ್ದಾರೆ. ಅದನ್ನೇ ನೆನಪಿಸಿಕೊಂಡು ಕಣ್ಣೀರು ಸುರಿಸುವ ಈಕೆ, ಯಪ್ಪಾ ಆ ಮನ್ಯಾಗಿನ ತಮ್ಮಾ ಕರೀಲಿಲ್ಲಂದ್ರ ನಾ ಇವತ್ತು ಜೀವಂತ ಇರತಿರಲಿಲ್ಲ ನೋಡು. ಅವ್ನ ಬದುಕಿಸ್ಯಾನ ನನ್ಗ. ಒಂದು ರೀತಿನೋಡಿದ್ರ ನಾ ಸತ್ತು ಹೋಗಿದ್ರ ಚಲೋ ಇತ್ತು. ಆದ್ಯಾವ್ರ ನನ್ನ ಜನ್ಮದಾಗ ಏನೇನು ಬರದಾನೋ ಏನೋ ಗೊತ್ತಿಲ್ಲ. ನಾವ್ ಪಡ್ಕೊಂಡ ಬಂದಿದ್ದನ್ನು ಅನುಭವಿಸಲೇ ಬೇಕಲ್ಲಾ. ಎಷ್ಟು ದಿನ ಈ ಜೀವಾ ಇರತೈತೋ ಏನೋ? ಎಂದು ಕಣ್ಣೀರಾದಳು.

ಈಕೆಯ ತಟ್ಟಿನ ಮನೆ ಹೈಟೆನ್ಷನ್ ವಿದ್ಯುತ್ ಲೈನ್‌ಕೆಳಗೆ ಇದೆ. ಹೀಗಾಗಿ ಪರಿಹಾರ ಕೊಡಲು ಬರಲ್ಲ. ಆದರೆ ಶಾಸಕರ ಸೂಚನೆ ಮೇರೆಗೆ ಮಾನವೀಯತೆ ಆಧಾರದ ಮೇಲೆ ಆಗಸ್ಟ್ ತಿಂಗಳಲ್ಲಿ ಮನೆ ಬಿದ್ದಿದ್ದಕ್ಕೆ 5200 ಹಣವನ್ನು ಪಂಚಾಯತಿ ಕೊಟ್ಟಿದೆ. ಈಗಲೂ ಮುರುಕು ಮನೆಯಲ್ಲೇ ಇದ್ದಾಳೆ. ಈಕೆಯ ವಾಸ್ತವ್ಯಕ್ಕೆ ನೆರವು ನೀಡುವ ಕೆಲಸವಾಗಬೇಕು. ಜತೆಗೆ ಸದ್ಯ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ  ಕೆಲಸವೂ ಇಲ್ಲದಂತಾಗಿದೆ. ಈಕೆಯ ಬದುಕಿಗೆ ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಬೇಕಿದೆ. ಎರಡು ತಿಂಗಳಿಂದ ಅರ್ಧ ಬಿದ್ದ ಮನೆಯಲ್ಲೇ ವಾಸವಾಗಿದ್ದಾರೆ, ಕಿರೇಸೂರು ಗೂಡುಮಾ ಮುಲ್ಲಾನವರ ಕರುಣಾಜನಕ ಕ

ನನ್ನ ಗಂಡ ಬಿಟ್ಟ ಮೇಲೆ ಇಲ್ಲೇ ಬಂದು ನೆಲೆಸಿದ್ದೇನೆ. ಕೂಲಿ ಕೆಲಸ ಮಾಡಿ ನನ್ನ ರೊಟ್ಟಿ ನಾ ಸಂಪಾದಿಸಿಕೊಳ್ಳುತ್ತೇನೆ. ನನಗೆ ಇರಲು ಪಂಚಾಯತಿ ಆಗಲಿ, ಎಂಎಲ್‌ಎ ಸಾಹೇಬ್ರಾಗಲಿ ವ್ಯವಸ್ಥೆ ಮಾಡಿದರೆ ಇರುವಷ್ಟು ದಿನ ಬದುಕ್ತೇನಿ ಎಂದು ಸಂತ್ರಸ್ತೆ  ಗೂಡುಮಾ ಮುಲ್ಲಾನವರ ಅವರು ಹೇಳಿದ್ದಾರೆ.  

ಇನ್ನು ಈ ಬಗ್ಗೆ ಮಾತನಾಡಿದ ನೆರೆಯ ನಿವಾಸಿ ದಾವಲಸಾಬ್ ಜರ್ಕಲಿ ಅವರು, ಈ ವೃದ್ಧೆಗೆ ನಾವೇ ಹೊರಗೆ ಕರಕೊಂಡು ಬಂದು ಅವತ್ತು ರಕ್ಷಿಸಿದೆವು. ಇಲ್ಲಂದ್ರ ಸತ್ತೇ ಹೋಗುತ್ತಿದ್ದಳು ಪಾಪಾ. ಇನ್ನೊಂದು ಸಲ ಮಳೆ ಬಂದರೆ ಮನೆ ಪೂರ್ಣ ನೆಲಕಚ್ಚುತ್ತೆ. ಅಷ್ಟರೊಳಗೆ ಈಕೆಯ ವಾಸ್ತವ್ಯಕ್ಕೆ ಬೇರೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ. 

click me!