ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡಿ| ಪಶ್ಚಿಮ ಪದವೀಧರ ಕ್ಷೇತ್ರದಿಂದ ಮೇಲ್ಮನೆ ಚುನಾವಣೆ ಪೂರ್ವಭಾವಿ ಸಭೆ| ಕ್ಷೇತ್ರದ ಬಿಜೆಪಿ ಉಸ್ತುವಾರಿ ಭಾನುಪ್ರಕಾಶ ಕರೆ| ಕಳೆದ ಎರಡು ಬಾರಿ ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳೇ ನಿರಂತರವಾಗಿ ಗೆಲ್ಲುತ್ತಿದ್ದಾರೆ| ಈ ಸಲವೂ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುವಂತಾಗಬೇಕು| ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು|
ಹುಬ್ಬಳ್ಳಿ(ಅ.18): ಪಶ್ಚಿಮ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಕ್ಷೇತ್ರದ ಬಿಜೆಪಿ ಉಸ್ತುವಾರಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ ಅವರು ಹೇಳಿದ್ದಾರೆ.
ಗುರುವಾರ ನಗರದ ಹೋಟೆಲ್‌ವೊಂದರಲ್ಲಿ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕರೆದ ಪೂರ್ವಭಾವಿ ಸಭೆ ಹಾಗೂ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಎರಡು ಬಾರಿ ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳೇ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಈ ಸಲವೂ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಜನಸಂಘ ಹುಟ್ಟು ಹಾಕುವಾಗ ಯಾರೊಬ್ಬರೂ ಗೆಲ್ಲುವ ಪರಿಸ್ಥಿತಿ ಇರಲಿಲ್ಲ. ಈ ದೇಶದ ಜನ ಒಪ್ಪುವಂಥ ಹೋರಾಟವನ್ನು ಮಾಡಿದೆವು. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಬಳಿ ರಾಷ್ಟ್ರಧ್ವಜ ಹಾರಿಸುವುದು. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವುದು. ಈ ಮಣ್ಣಿನ ಸಂಸ್ಕೃತಿಗೆ ಗೌರವ ತರುವ ರೀತಿಯಲ್ಲಿ, ಜನರ ಭಾವನೆಗಳನ್ನು ಅರಳಿಸಿಕೊಂಡು ಹೋರಾಟ ಮಾಡಿದೆವು. ಇದರ ಪರಿಣಾಮವಾಗಿ ಇದೀಗ ದೇಶ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಬುದ್ಧಿವಂತರ ಕ್ಷೇತ್ರವಿದು
ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಬುದ್ಧಿವಂತರ ಕ್ಷೇತ್ರವಿದು. ಆದಕಾರಣ ಹೆಚ್ಚೆಚ್ಚು ಮತದಾರರನ್ನು ಸೆಳೆಯುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರ ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಕರೆ ನೀಡಿದರು.
ಪ್ರತಿಸಲವೂ ಹೊಸ ಮತದಾರರ ಪಟ್ಟಿಯನ್ನೇ ಮಾಡಿಸುವುದು ಈ ಚುನಾವಣೆಯ ವಿಶೇಷ. ಇದು ಎಲ್ಲರಿಗೂ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಎಲ್ಲ ಕಾಲೇಜ್, ಶಾಲೆಗಳಿಗೆ, ಸರ್ಕಾರಿ ಕಚೇರಿ, ಅರೇ ಸರ್ಕಾರಿ ಕಚೇರಿ ಹೀಗೆ ಎಲ್ಲೆಡೆ ಪದವೀಧರರನ್ನು ಸಂಪರ್ಕಿಸಬೇಕು. ಆ ಮೂಲಕ ಮತದಾರರ ಪಟ್ಟಿಯಲ್ಲಿ ಪದವೀಧರರ ಸೇರ್ಪಡೆಗೆ ನೆರವಾಗಬೇಕು ಎಂದರು.
ಸಭೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಹುಡಾದ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ರವಿ ದಂಡಿನ, ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಂಗಾ ಬದ್ದಿ, ಸಂತೋಷ ಚವ್ಹಾಣ ಸೇರಿದಂತೆ ಹಲವರು ಇದ್ದರು.
ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಇಷ್ಟು ದಿನ ನಾಲ್ಕು ಜನರ ನಡುವೆ ಇದ್ದ ಪೈಪೋಟಿ ಇದೀಗ ಎಂಟ್ಹತ್ತು ಜನರ ಮಧ್ಯೆ ನಡೆದಿದೆ. ತಾವೂ ಒಂದು ಕೈ ನೋಡೇ ಬಿಡೋಣ ಎಂದು ತಾವೂ ಆಕಾಂಕ್ಷಿಯೆಂದು ಅರ್ಜಿ ಸಲ್ಲಿಸುತ್ತಿದ್ದಾರೆ.
ಹಾಲಿ ಸದಸ್ಯ ಎಸ್.ವಿ. ಸಂಕನೂರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಹುಡಾದ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರವಿ ದಂಡಿನ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ ಗುರಿಕಾರ, ಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಮಜ್ಜಗಿ, ವೀರೇಶ ಸಂಗಳದ ಹೀಗೆ ಒಂಬತ್ತು ಜನರು ಟಿಕೆಟ್ ಕೇಳಿದ್ದಾರೆ.
ಈ ಎಲ್ಲರ ಅಭಿಪ್ರಾಯಗಳನ್ನು ಕ್ಷೇತ್ರದ ಉಸ್ತುವಾರಿ ಭಾನುಪ್ರಕಾಶ ಕೇಳಿದ್ದಾರೆ. ಕೆಲವರು ತಾವು 30 ವರ್ಷಗಳಿಂದ ಪಕ್ಷದಲ್ಲಿದ್ದೇವೆ. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇವೆ ನಮಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ.
ಎಲ್ಲರ ಅಭಿಪ್ರಾಯ ಕೇಳಿದ ಭಾನುಪ್ರಕಾಶ ಅವರು, ಕ್ಷೇತ್ರಕ್ಕೆ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಆದರೆ ನಾವು ಈಗಲೇ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಸಭೆ ನಡೆಸಲಾಗುವುದು. ಅಲ್ಲಿನ ಅಭಿಪ್ರಾಯ ಸಂಗ್ರಹಿಸಲಾಗುವುದು. ಆಯಾ ಜಿಲ್ಲೆಗಳಿಂದ ಪಟ್ಟಿತರಿಸಿಕೊಂಡು ರಾಜ್ಯ ಸಮಿತಿ, ಕೇಂದ್ರ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಆಕಾಂಕ್ಷಿಗಳೆಲ್ಲರಿಗೂ ಟಿಕೆಟ್ ಕೊಡಲು ಬರಲ್ಲ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯವಾಗುತ್ತೆ. ಆದಕಾರಣ ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಮ್ಮತದಿಂದ ಅವರ ಗೆಲುವಿಗೆ ಶ್ರಮಿಸಬೇಕು. ಸದ್ಯ ಎಲ್ಲರೂ ಮತದಾರರ ಪಟ್ಟಿಸಿದ್ಧತೆಯಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ಯಾವ ರೀತಿ ಪಕ್ಷ ನಿರ್ವಹಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.