’ವಾಯವ್ಯ ಸಾರಿಗೆ ಸಂಸ್ಥೆಗೆ 200 ಕೋಟಿ ಅನುದಾನ ತರಲು ಯತ್ನ’

By Web DeskFirst Published Oct 15, 2019, 7:45 AM IST
Highlights

ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಪಾಟೀಲ್ ಹೇಳಿಕೆ | ಬಿಆರ್‌ಟಿಎಸ್‌ನಿಂದ ತಿಂಗಳಿಗೆ 1 ಕೋಟಿ ನಷ್ಟ|  ಬರ ಹಾಗೂ ಇತರ ಸಮಸ್ಯೆ ನಡುವೆಯೂ ಹಿಂದೆ ಸಂಸ್ಥೆಗೆ ಸರ್ಕಾರ ವಿಶೇಷ ಅನುದಾನ ನೀಡಿತ್ತು| ಈ ವರ್ಷವೇ 89.6 ಕೋಟಿ ನಷ್ಟವಾಗಿದೆ| ಒಟ್ಟಾರೆ ಸಂಸ್ಥೆಯು 991.53 ಕೋಟಿ ನಷ್ಟದಲ್ಲಿದೆ| ಹೀಗಾಗಿ ಕಳೆದ ಐದು ವರ್ಷದಿಂದ ನೌಕರರಿಗೆ ನೀಡಬೇಕಾದ ಗ್ರ್ಯಾಚ್ಯುಟಿ, ಬೋನಸ್, ವಿಮೆ ಸೇರಿ ಹಲವು ಸೌಕರ್ಯವನ್ನು ನೀಡಲು ಸಾಧ್ಯವಾಗಿಲ್ಲ| ಸರ್ಕಾರದಿಂದ 781 ಕೋಟಿ ಬಾಕಿ ಬರಬೇಕಿದ್ದು, ಈ ಹಣ ಬಿಡುಗಡೆಯಾದಲ್ಲಿ ಬಹುಪಾಲು ಸಮಸ್ಯೆ ನೀಗಲಿದೆ| 

ಹುಬ್ಬಳ್ಳಿ[ಅ. 15): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿ ವಿವಿಧ ಯೋಜನೆಗಾಗಿ ಸರ್ಕಾರದಿಂದ 200 ಕೋಟಿ ವಿಶೇಷ ಅನುದಾನ ತರುವುದಾಗಿ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. 

ಸೋಮವಾರ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಹಾಗೂ ಇತರ ಸಮಸ್ಯೆ ನಡುವೆಯೂ ಹಿಂದೆ ಸಂಸ್ಥೆಗೆ ಸರ್ಕಾರ ವಿಶೇಷ ಅನುದಾನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ 200 ಕೋಟಿ ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಸಂಸ್ಥೆ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ತಿಳಿದ ಸಂಗತಿ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವರ್ಷವೇ 89.6 ಕೋಟಿ ನಷ್ಟವಾಗಿದೆ. ಒಟ್ಟಾರೆ ಸಂಸ್ಥೆಯು 991.53 ಕೋಟಿ ನಷ್ಟದಲ್ಲಿದೆ. ಹೀಗಾಗಿ ಕಳೆದ ಐದು ವರ್ಷದಿಂದ ನೌಕರರಿಗೆ ನೀಡಬೇಕಾದ ಗ್ರ್ಯಾಚ್ಯುಟಿ, ಬೋನಸ್, ವಿಮೆ ಸೇರಿ ಹಲವು ಸೌಕರ್ಯವನ್ನು ನೀಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ 781 ಕೋಟಿ ಬಾಕಿ ಬರಬೇಕಿದ್ದು, ಈ ಹಣ ಬಿಡುಗಡೆಯಾದಲ್ಲಿ ಬಹುಪಾಲು ಸಮಸ್ಯೆ ನೀಗಲಿದೆ. ಈ ಹಣವನ್ನು ಬಿಡುಗಡೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. 

ನಿತ್ಯ 77 ಲಕ್ಷ ನಷ್ಟ: 

ಸಂಸ್ಥೆಗೆ ದಿನಕ್ಕೆ 77 ಲಕ್ಷ ನಷ್ಟವಾಗುತ್ತಿದೆ. ಈ ರೀತಿಯ ನಷ್ಟ ಹೇಗೆ ಸಂಭವಿಸುತ್ತಿದೆ ಎಂದು ಪರಿಶೀಲನೆ ನಡೆಸಿ ಅನಗತ್ಯ ಆರ್ಥಿಕ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ನೌಕರರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಎಸ್.ಪಾಟೀಲ್ ಹೇಳಿದರು. 

ನೌಕರರಿಗೆ ಆನ್‌ಲೈನ್ ಆಧಾರಿತ ರಜೆ, ಜೇಷ್ಠತೆ ಹಾಗೂ ಕೌನ್ಸೆಲಿಂಗ್ ಮೂಲಕ ಕರ್ತವ್ಯ ನಿಯೋಜನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ 630 ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುವುದು. 2500 ಚಾಲನಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ೧೪ ನೂತನ ಬಸ್ ನಿಲ್ದಾಣ, 6 ಘಟಕಗಳು ನಿರ್ಮಿಸಿ, ಹಳೆಯ ಬಸ್ ನಿಲ್ದಾಣ ಹಾಗೂ ಘಟಕಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಹಾನಗರದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸಿ ಬೇರೆ ಸಾರಿಗೆ ಸಂಸ್ಥೆಯನ್ನಾಗಿ ರೂಪಿಸುವ ಪ್ರಯತ್ನದ ಕುರಿತು ಗಮನಕ್ಕೆ ಬಂದಿದೆ. ನಗರ ಸಾರಿಗೆ ಸಂಸ್ಥೆಯಿಂದಲೆ ಹೆಚ್ಚಿನ ಆದಾಯ ಬರುವ ಹಿನ್ನೆಲೆಯಲ್ಲಿ ಇಂಥ ಪ್ರಯತ್ನ ಮಾಡದಂತೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಇದರಲ್ಲಿ ಯಾವುದೆ ಬದಲಾವಣೆ ಮಾಡದಂತೆ ಸೂಚಿಸುತ್ತೇವೆ ಎಂದು ಅವರು ತಿಳಿಸಿದರು. 

ಬಿಆರ್‌ಟಿಎಸ್‌ನಿಂದ ತಿಂಗಳಿಗೆ 1 ಕೋಟಿ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಕುರಿತಾಗಿಯೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಿಗಮದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಸಾವಕಾರ ಅವರ ಅವಧಿಯಲ್ಲಿ ನಿಗಮದ ಆರ್ಥಿಕತೆ ಸುಧಾರಣೆಯತ್ತ ತಿರುಗಿತ್ತು. ಆದರೆ, ಬಳಿಕ ಆರು ವರ್ಷ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೆ ಸಂಸ್ಥೆ ಮತ್ತೆ ಅಧೋಗತಿಯತ್ತ ಸಾಗಲು ಕಾರಣವಾಯಿತೆಂದರು. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಹಲವರಿದ್ದರು.

ಕೋರ್ಟ್ ತೀರ್ಪಿನ ಮೇಲೆ ನಿರ್ಧಾರ

ಶಿವರಾಮ ಹೆಬ್ಬಾರ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿದ್ದಾರೆ. ಅವರ ಅನರ್ಹತೆ, ಮುಂದಿನ ಚುನಾವಣೆ ಸ್ಪರ್ಧೆ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಚುನಾವಣೆ ಟಿಕೆಟ್‌ಗೆ ನಾನು ಆಕಾಂಕ್ಷಿ ಹೌದೋ ಅಲ್ಲವೋ ಎನ್ನುವುದನ್ನು ಹೇಳುತ್ತೇನೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ್ ಹೇಳಿದರು. ಯಲ್ಲಾಪುರ-ಮುಂಡಗೋಡ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಕುರಿತು ಮಾತನಾಡಿ, ಹೆಬ್ಬಾರ್ ಪರ ತೀರ್ಪು ಬಂದು ಅವರು ಚುನಾವಣೆಗೆ ಸ್ಪರ್ಧಿಸುವುದಾದರೆ ನಾನು ಹಿಂದೆ ಸರಿಯುತ್ತೇನೆ. ಒಂದು ವೇಳೆ ವಿಭಿನ್ನ ಪರಿಸ್ಥಿತಿ ಎದುರಾದರೆ ಮುಂದೆ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.

click me!