ಟ್ರಾಫಿಕ್ ದಂಡ ಕುರಿತು ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ. 200 ರೂಪಾಯಿ ಟ್ರಾಫಿಕ್ ಫೈನ್ ಪ್ರಕರಣದಲ್ಲಿ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಲು 10,000 ರೂಪಾಯಿ ಖರ್ಚು ಮಾಡಿದ ಘಟನೆ ನಡೆದಿದೆ. ಈ ಕುರಿತ ವಿವರ ಇಲ್ಲಿವೆ.
ಪುಣೆ(ಮಾ.23): ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕು. ಕೆಲವೊಮ್ಮೆ ಇ ಚಲನ್ ಎಡವಟ್ಟು ಸೇರಿದಂತೆ ಹಲವು ಕಾರಣಗಳಿಂದ ತಪ್ಪು ಮಾಡದ ವಾಹನ ಮಾಲೀಕರಿಗೆ ದುಬಾರಿ ದಂಡ ಕಟ್ಟಲು ನೊಟೀಸ್ ಬಂದ ಊದಾಹರಣೆಗಳಿವೆ. ಇದೀಗ ಪುಣೆಯ ಉದ್ಯಮಿಗೆ ಟ್ರಾಫಿಕ್ ಪೊಲೀಸರು 200 ರೂಪಾಯಿ ದಂಡ ಹಾಕಿದ್ದಾರೆ. ಆದರೆ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಲು ಉದ್ಯಮಿ 10,000 ರೂಪಾಯಿ ಖರ್ಚು ಮಾಡಿ 2 ತಿಂಗಳು ಕೋರ್ಟ್ ಅಲೆದಾಡಬೇಕಾದ ಘಟನೆ ನಡೆದಿದೆ.
ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!
ಪುಣೆಯ ಉದ್ಯಮಿ ಬಿನೋಯ್ ಗೋಪಾಲನ್‌ಗೆ ಪಿಂಪ್ರಿ-ಚಿಂಚಿವಾಡ್ ಠಾಣಾ ಪೊಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿದ್ದೀರಿ ಎಂದು 200 ರೂಪಾಯಿ ದಂಡ ಹಾಕಿದ್ದಾರೆ. ಪೊಲೀಸರ ಅಧೀಕೃತ ದಾಖಲೆಗಳಲ್ಲಿ ಇದು ನೋ ಪಾರ್ಕಿಂಗ್ ಝೋನ್. ಹಾಗಾದರೆ ಇಲ್ಲಿ ಉದ್ಯಮಿ ತಪ್ಪು ಮಾಡಿದ್ದಾನೆ ಎಂದರ್ಥವಲ್ಲ.
ನೋ ಪಾರ್ಕಿಂಗ್ ಝೋನ್ ಎಂಬ ಬೋರ್ಡ್ ಡ್ಯಾಮೇಜ್ ಆಗಿದೆ. ನೋ ಪಾರ್ಕಿಂಗ್ ಬದಲು ಇದು ಇತ್ತ ಕಡೆ ಪಾರ್ಕ್ ಮಾಡಬಹುದು ಎಂದು ಸೂಚಿಸುವಂತಿತ್ತು. ಬಿನೋಯ್ ಮಾತ್ರವಲ್ಲ ಹಲವರು ಇದೇ ಸ್ಥಳದಲ್ಲಿ ಪಾರ್ಕಿ ಮಾಡಿದ್ದಾರೆ. ಪೊಲೀಸರು ಎಲ್ಲರಿಗೂ ದಂಡ ಹಾಕಿದ್ದಾರೆ. ಆದರೆ ಬಿನೋಯ್ ಗೋಪಾಲನ್ ದಂಡ ಕಟ್ಟಲು ನಿರಾಕರಿಸಿದ್ದಾರೆ.
ಪಾರ್ಕಿಂಗ್ ಬೋರ್ಡ್ ಡ್ಯಾಮೇಜ್ ಆಗಿರುವುದು ತನ್ನ ತಪ್ಪಲ್ಲ, ಹೀಗಾಗಿ ಇ ಚಲನ್ ರದ್ದು ಮಾಡಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಪೊಲೀಸರ ಪ್ರತಿಕ್ರಿಯೆ ಬಿನೋಯ್ ಗೋಪಾಲನ್ ಅವರಿಗೆ ನೋವಾಗಿದೆ. ಇದಕ್ಕೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದ ಗೋಪಾಲನ್ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಎಲ್ಲಾ ದಾಖಲೆಗಳನ್ನು ನೀಡಿದ ಬಿನೋಯ್ ಗೋಪಾಲನ್ ವಿಚಾರಣೆ ಮುಂದುವರಿಸಿದ್ದಾರೆ. ವಕೀಲರ ನೇಮಿಸಿ ಪ್ರಕರಣಕ್ಕೆ ಅಂತ್ಯಕಾಣಿಸಲು ಪಣತೊಟ್ಟಿದ್ದಾರೆ. 2 ತಿಂಗಳ ಅಲೆದಾಟ, ವಿಚಾರಣೆ ಬಳಿಕ ಬಿನೋಯ್ ಗೋಪಾಲನ್ ಅವರ ತಪ್ಪಿಲ್ಲ, ಇ ಚಲನ್ ರದ್ದು ಮಾಡಲು ಕೋರ್ಟ್ ಸೂಚಿಸಿದೆ. ಆದರೆ 200 ರೂಪಾಯಿ ದಂಡ ಕಟ್ಟುವ ಪ್ರಕರಣಕ್ಕೆ ಬಿನೋಯ್ ಗೋಪಾಲನ್ ಅಷ್ಟರಲ್ಲಿ 10,000 ರೂಪಾಯಿ ಖರ್ಚು ಮಾಡಿದ್ದರು.
200 ರೂಪಾಯಿ ದಂಡ ಕಟ್ಟಿ ನಾನು ಸುಮ್ಮನಾಗುತ್ತಿದ್ದೆ. ಆದರೆ ಪೊಲೀಸರ ವರ್ತನೆ, ನನ್ನನ್ನೇ ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸುವ ಯತ್ನಗಳಲ್ಲ ನನ್ನ ಕೆರಳಿಸಿತು. ಹೀಗಾಗಿ ದುಡ್ಡು ಖರ್ಚಾದರೂ ಹೋರಾಟ ಮಾಡಿದ್ದೇನೆ ಎಂದು ಬಿನೋಯ್ ಗೋಪಾಲನ್ ಹೇಳಿದ್ದಾರೆ.