
ಇಂದೋರ್ (ಡಿ.16) ದ್ವಿಚಕ್ರ ವಾಹನ ಸವಾರ, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಇದರಿಂದ ಯಾರಿಗೂ ವಿನಾಯಿತಿ ಇಲ್ಲ. ಹೆಲ್ಮೆಟ್ ಧರಿಸದೆ ತೆರಳಿದರೆ ದಂಡ ವಿಧಿಸುವುದು ಖಚಿತ. ಆದರೆ ಇಲ್ಲೊಬ್ಬ ಬೈಕ್ ಸವಾರನ ಹಿಡಿದ ಟ್ರಾಫಿಕ್ ಪೊಲೀಸರು, ಎಲ್ಲಪ್ಪಾ ನಿನ್ ಹೆಲ್ಮೆಟ್ ಎಂದು ಪ್ರಶ್ನಿಸಿದ್ದಾರೆ. ಆದರೆ ಬೈಕ್ ಸವಾರನ ಒಂದೇ ಮಾತಿಗೆ ಪೊಲೀಸರು ಸವಾರನಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ದಾರೆ. ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಇದೇ ವಿಡಿಯೋದಲ್ಲಿ ಪೊಲೀಸ್ ವಿಶೇಷ ಮನವಿಯೊಂದನ್ನು ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯ ಪ್ರದೇಶ ಟ್ರಾಫಿಕ್ ಪೊಲೀಸರು ಎಂದಿನಂತೆ ಟ್ರಾಫಿಕ್ ಉಲ್ಲಂಘನೆ ಚೆಕ್ ಮಾಡಲು ರಸ್ತೆಯಲ್ಲಿ ನಿಂತಿದ್ದಾರೆ. ಈ ದಾರಿಯಲ್ಲಿ ಬರುವ ಹಲವು ದ್ವಿಚಕ್ರ ವಾಹನ ಸವಾರರು, ಕಾರು ಸೇರಿದಂತೆ ಇತರ ವಾಹನ ಸವಾರರ ನಿಲ್ಲಿಸಿ ವಿಮೆ, ಎಮಿಶನ್, ಸೀಟ್ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಇತರ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದರು. ಇದೇ ವೇಳೆ ಟಿವಿಎಸ್ ಬೈಕ್ ಮೂಲಕ ವ್ಯಕ್ತಿಯೊಬ್ಬರು ಆಗಮಿಸಿದ್ದಾರೆ. ಯಾವುದೆ ಹೆಲ್ಮೆಟ್ ಇಲ್ಲದೆ ಪೊಲೀಸರು ನಿಂತಿದ್ದದರೂ ರಾಜಾರೋಷವಾಗಿ ಆಗಮಿಸಿದ ವ್ಯಕ್ತಿಯನ್ನು ಪೊಲೀಸರು ತಡೆದಿದ್ದಾರೆ. ಬೈಕ್ ಸವಾರನ ನಿಲ್ಲಿಸಿದ ಪೊಲೀಸರು ಹೆಲ್ಮೆಟ್ ಕುರಿತು ಪ್ರಶ್ನಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ ಬೈಕ್ ಮೂಲಕ ಆಗಮಿಸಿದ್ದು ಸಾಮಾನ್ಯ ವ್ಯಕ್ತಿ. ಹೆಲ್ಮೆಟ್ ಎಲ್ಲಿ ಎಂದು ಕೇಳಿದಾಗ, ಫೋನ್ ತೆಗೆದು ಯಾರಿಗೂ ಫೋನ್ ಮಾಡಿ ನೆರವು ಕೇಳಲಿಲ್ಲ. ಬದಲಾಗಿ, ಸರ್ ನನ್ನ ತಲೆ ಸೈಝ್‌ಗೆ ಯಾವ ಊರಿನಲ್ಲೂ ಹೆಲ್ಮೆಟ್ ಇಲ್ಲಾ ಸಾರ್ ಎಂದಿದ್ದಾನೆ. ಈತನ ಮಾತಿಗೆ ಟ್ರಾಫಿಕ್ ಪೊಲೀಸ್ ಅರೆ ಇದು ಹೇಗೆ ಸಾಧ್ಯ ಎಂದು ಅನುಮಾನಗೊಂಡಿದ್ದಾರೆ. ಹೀಗಾಗಿ ತಮ್ಮ ಬಳಿ ಇರುವ ಹೆಲ್ಮೆಟ್ ನೀಡಿ ಇದನ್ನು ಧರಿಸಲು ಸೂಚಿಸಿದ್ದಾರೆ. ಆದರೆ ವ್ಯಕ್ತಿಯ ತಲೆ ಗಾತ್ರ ದೊಡ್ಡದಾಗಿರುವ ಕಾರಣ ಹೆಲ್ಮೆಟ್ ಧರಿಸಲು ಸಾಧ್ಯವಾಗಲಿಲ್ಲ. ಆತನ ತಲೆ ಮುಂದೆ ಹೆಲ್ಮೆಟ್ ಸಣ್ಣದಾಗಿತ್ತು. ಇತ್ತ ಟ್ರಾಫಿಕ್ ಪೊಲೀಸ್‌ಗೆ ನಗು ತಡೆಯಲಾಗಲಿಲ್ಲ. ದಂಡ ವಿಧಿಸಲು ಹೋದ ಪೊಲೀಸ್ ಕೊನೆಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಹೆಲ್ಮೆಟ್ ಧರಿಸಲು ಸಾಧ್ಯವಾಗದ ಸಾಮಾನ್ಯ ವ್ಯಕ್ತಿ ಕುರಿತು ವಿಡಿಯೋ ಮೂಲಕ ಮಾತನಾಡಿದ ಪೊಲೀಸ್, ಎಲ್ಲಾ ಹೆಲ್ಮೆಟ್ ಕಂಪನಿಗೆ ಒಂದು ಮನವಿ ಮಾಡುತ್ತೇನೆ. ದಯವಿಟ್ಟು ಈ ರೀತಿಯ ಹಲವರಿಗೆ ದೊಡ್ಡ ಗಾತ್ರದ ಹೆಲ್ಮೆಟ್ ಉತ್ಪಾದಿಸಬೇಕು. ದಾದಾ ರೀತಿಯ ಹಲವು ವ್ಯಕ್ತಿಗಳ ತಲೆ ಗಾತ್ರ ದೊಡ್ಡದಿದೆ. ಅವರಿಗೆ ಹೆಲ್ಮೆಟ್ ಧರಿಸಲು ಸಾಧ್ಯವಾಗುತ್ತಿಲ್ಲ. ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ದೊಡ್ಡ ಗಾತ್ರದ ಹೆಲ್ಮೆಟ್ ಉತ್ಪಾದಿಸಿ ಎಂದು ಪೊಲೀಸ್ ಮನವಿ ಮಾಡಿದ್ದಾರೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. 26 ಮಿಲಿಯನ್‌ಗೂ ಅಧಿಕ ವೀವ್ಸ್ ಹಾಗೂ 1.2 ಲಕ್ಷ ಕಮೆಂಟ್ ವ್ಯಕ್ತವಾಗಿದೆ. ಹಲವರು ಈ ರೀತಿಯ ಸಮಸ್ಯೆ ಇದೆ ಎಂದಿದ್ದಾರೆ. ಇದೇ ವೇಳೆ ಅಂಕಲ್ ಚಲನ್, ದಂಡದಿಂದ ಪ್ರೀಮಿಯಂ ಡಿಸ್ಕೌಂಟ್ ಪಡೆದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಜನಪ್ರಿಯ ಹೆಲ್ಮೆಟ್ ಕಂಪನಿ ಸ್ಟೀಲ್‌ಬರ್ಡ್ ಹೆಲ್ಮೆಟ್ ಗಿಫ್ಟ್ ನೀಡುವುದಾಗಿ ಹೇಳಿದೆ. ಈ ವಿಡಿಯೋಗೆ ಕಮೆಂಟ್ ಮಾಡಿದ ಕಂಪನಿ, ನಾವು ಈ ವ್ಯಕ್ತಿಗೆ ಹೆಲ್ಮೆಟ್ ಉಡುಗೊರೆ ನೀಡಲು ಬಯಸಿದ್ದೇವೆ. ದಯವಿಟ್ಟು ವ್ಯಕ್ತಿಯ ಸಂಪರ್ಕ ಇದ್ದರೆ ತಿಳಿಸಿ ಎಂದು ಕಮೆಂಟ್ ಮಾಡಿದೆ. ಇದೇ ವೇಳೆ ವೇಗಾ ಹೆಲ್ಮೆಟ್ ಕಂಪನಿ, ಈ ಸವಾಲು ನಾವು ಸ್ವೀಕರಿಸಿದ್ದೇವೆ ಎಂದಿದೆ.