ಕಮ್ಮಾರಗಟ್ಟೆಯಲ್ಲಿ ಐತಿಹಾಸಿಕ ಕಾರ್ಣಿಕೋತ್ಸವ.. ರೈತರಿಗೆ ಸಿಕ್ಕೇ ಬಿಡ್ತು ಗುಡ್‌ನ್ಯೂಸ್

Published : Aug 17, 2026, 10:45 PM IST
Kammaragatte Karnika

ಸಾರಾಂಶ

ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೆ ಏರಿತಲೆ' ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸೂಚನೆಯೋ ಅಥವಾ ರೈತರ ಬೆಳೆಗೆ ಸಿಗುವ ಬಂಪರ್ ಬೆಲೆಯ ಮುನ್ಸೂಚನೆಯೋ ಎಂಬ ಚರ್ಚೆ ಭಕ್ತರಲ್ಲಿ ಶುರುವಾಗಿದೆ.

ದಾವಣಗೆರೆ: ನಾಡಿನಾದ್ಯಂತ ಗರುಡ ಪಂಚಮಿಯ ಸಡಗರ ಮನೆ ಮಾಡಿತ್ತು. ಇತ್ತ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಮೈನವಿರೇಳಿಸುವ ಕಾರ್ಣಿಕೋತ್ಸವ ಜರುಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾರ್ಣಿಕದ ಭವಿಷ್ಯವಾಣಿ ಕೇಳಲು ಸಾವಿರಾರು ಭಕ್ತರು ಜಮಾಯಿಸಿದ್ದರು. ಈ ಬಾರಿ ನುಡಿಯಲಾದ ಭವಿಷ್ಯವು ಬೆಲೆ ಏರಿಕೆ ಹಾಗೂ ರೈತರ ಬೆಳೆಯ ವಿಚಾರದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಏನಿದು ಭವಿಷ್ಯವಾಣಿ?

ಕುಂಬಳೂರಿನ ಗಣಮಗ ದುಂಡ್ಯಪ್ಪ ಅವರು ಬಿಲ್ಲು ಏರಿ ಆಂಜನೇಯ ಸ್ವಾಮಿಯ ಸ್ಮರಣೆ ಮಾಡುತ್ತಾ, "ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ.. ಪರಾಕ್! ಎಂದು ದೈವವಾಣಿ ನುಡಿದರು.

ಕಾರ್ಣಿಕದ ಈ ನಿಗೂಢ ನುಡಿಗಳನ್ನು ಭಕ್ತರು ಹಾಗೂ ಹಿರಿಯರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಂದರೆ ಭೂಮಿಯಲ್ಲಿ ಬೆಳೆದ ಬೆಳೆಗಳು ಅಥವಾ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಲಿದೆ. ಅಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ಒಂದು ವಿಶ್ಲೇಷಣೆ.

ರೈತರು ಬೆಳೆದ ಮುತ್ತಿನಂತಹ ಬೆಳೆಗೆ (ಧಾನ್ಯಗಳಿಗೆ) ಉತ್ತಮ ಮಾರುಕಟ್ಟೆ ದರ ಸಿಗಲಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂಬ ಆಶಾವಾದವೂ ವ್ಯಕ್ತವಾಗಿದೆ. ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ ಎಂದರೆ ಅಶ್ವಿನಿ ಮಳೆ ಮಾಯವಾಗಿ ಅಥವಾ ಮಳೆ ಕೊರತೆಯಾಗಿ ಬೆಳೆಗಳ ಇಳುವರಿ ಕಡಿಮೆಯಾಗಬಹುದು. ಈ ಕಾರಣದಿಂದ ಬೆಲೆ ಹೆಚ್ಚಾಗಬಹುದು ಎಂಬ ಎಚ್ಚರಿಕೆಯನ್ನೂ ಭಕ್ತರು ಕಾಣುತ್ತಿದ್ದಾರೆ.

ಮೈಸೂರು ಅರಸರೂ ಕಾಯುತ್ತಿದ್ದ ಕಾರ್ಣಿಕ

ಕಮ್ಮಾರಗಟ್ಟೆಯ ಕಾರ್ಣಿಕಕ್ಕೆ ತನ್ನದೇ ಆದ ಇತಿಹಾಸವಿದೆ. ಹಿಂದೆ ಮೈಸೂರಿನ ಮಹಾರಾಜರು ಕೂಡ ಈ ಗ್ರಾಮದ ಕಾರ್ಣಿಕದ ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು ಎಂಬ ಪ್ರತೀತಿ ಇದೆ. ನಾಡಿನ ಸುಭಿಕ್ಷೆ ಮತ್ತು ಮಳೆ-ಬೆಳೆಯ ಬಗ್ಗೆ ಇಲ್ಲಿನ ಭವಿಷ್ಯವಾಣಿ ಅತ್ಯಂತ ನಿಖರವಾಗಿರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ ಈ ಅದ್ಧೂರಿ ಜಾತ್ರೆ ನಡೆಯಿತು. ಮಳೆ ಬಿಡುವು ನೀಡಿದ್ದರಿಂದ ದಾವಣಗೆರೆ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು. ವಿಶೇಷವಾಗಿ ನವದಂಪತಿಗಳು ಇಲ್ಲಿನ ಬುಡಮೇಲಾದ ಹುಣಸೆ ಮರಕ್ಕೆ ಮಂಡಕ್ಕಿ ಎರಚಿ ದೇವರಿಗೆ ನಮಿಸಿದರು.

ಒಟ್ಟಾರೆಯಾಗಿ ಕಮ್ಮಾರಗಟ್ಟೆಯ ಈ ಬಾರಿಯ ಕಾರ್ಣಿಕವು ನಾಡಿನ ರೈತರಿಗೆ ಸಮೃದ್ಧಿ ತರಲಿ ಹಾಗೂ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟದಿರಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.

PREV
Read more Articles on
click me!

Recommended Stories

ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ: ದಾವಣಗೆರೆಯ Zudio ಮಳಿಗೆಗೆ ₹ 30,000 ದಂಡ
'ನನ್ನ ಕಣ್ಣು ಕುರುಡು ಅಂದ್ಕೊಂಡ್ರಾ?..' ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳಿಗೆ ಸಿಎಂ ಕ್ಲಾಸ್!