ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರ ನೇಮಕ ಖಂಡಿಸಿ ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಇದೀಗ ಸೋಮವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಬಾರದ ಅಧ್ಯಾಪಕಿಯನ್ನು ಶಾಲೆ ಗೇಟ್‌ನಿಂದಲೇ ವಾಪಸ್ ಕಳುಹಿಸಿದ್ದಾರೆ.
ಮಂಗಳೂರು [ಅ.15]: ಗಡಿನಾಡು ಕಾಸರಗೋಡಿನ (ಕೇರಳ ರಾಜ್ಯ) ಬೇಕಲ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರ ನೇಮಕ ಖಂಡಿಸಿ ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಇದೀಗ ಸೋಮವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಬಾರದ ಅಧ್ಯಾಪಕಿಯನ್ನು ಶಾಲೆ ಗೇಟ್‌ನಿಂದಲೇ ವಾಪಸ್ ಕಳುಹಿಸಿದ್ದಾರೆ.
ಬೇಕಲ ಕನ್ನಡ ಶಾಲೆಗೆ ನೇಮಕಗೊಂಡಿದ್ದ ಮಲಯಾಳಂ ಭಾಷಿಕ ಅಧ್ಯಾಪಕಿ ಕರ್ತವ್ಯಕ್ಕೆ ಆಗಮಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಗೇಟ್ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಅಧ್ಯಾಪಕಿಗೆ ಶಾಲೆ ಆವರಣ ಪ್ರವೇಶಿಸಲು ಅವಕಾಶ ನೀಡಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಅಧ್ಯಾಪಕಿ ಕೊನೆಗೆ ವಾಪಸ್ ತೆರಳಬೇಕಾಯಿತು. ರಜೆಯಲ್ಲಿ ತೆರಳಿದ ಶಿಕ್ಷಕಿ: ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಯುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಹೊಸ ಶಿಕ್ಷಕಿ ಮೂರು ತಿಂಗಳು ರಜೆ ಹಾಕಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕನ್ನಡ ಶಾಲೆಗೆ ಕನ್ನಡ ಶಿಕ್ಷಕರ ನೇಮಕವಾಗದೆ ಬೇರೆ ಶಿಕ್ಷಕರನ್ನು ನೇಮಿಸಿದರೆ ಪ್ರತಿಭಟನೆ ತೀವ್ರಗೊಳಿಸುವ ಕುರಿತು ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಏತನ್ಮಧ್ಯೆ, ಬೇಕಲ ಶಾಲೆಗೆ ನೇಮಕವಾದ ಹೊಸ ಶಿಕ್ಷಕರಂತೆ ಹೊಸದುರ್ಗ ತಾಲೂಕಿನ ಉದುಮ ಶಾಲೆಗೆ ಮಲಯಾಳಂ ಭಾಷಿಕ ಶಿಕ್ಷಕರು ಕೂಡ ಸೋಮವಾರ ಆಗಮಿಸುವವರಿದ್ದರು. ಹೀಗಾಗಿ ಅಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದರೆ ಶಿಕ್ಷಕರು ಗೈರಾಗಿದ್ದರಿಂದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತರಗತಿಗೆ ಹಾಜರಾದರು.