
ಯಾದಗಿರಿ (ಮೇ.18) : ಕೌಟುಂಬಿಕ ಕಲಹ ವಿಚಾರವಾಗಿ ಪೊಲೀಸರು ದೂರು ಪಡೆಯುತ್ತಿಲ್ಲ ಎಂದು ನೊಂದುಕೊಂಡು, ಅಂಗವಿಕಲ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ತಾನು ಹಾಗೂ ಪತ್ನಿ ಅಂಗವಿಕಲರಾಗಿದ್ದು, ತನ್ನ ತಂಗಿ ಹಾಗೂ ಆಕೆಯ ಗಂಡ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅನೇಕ ಬಾರಿ ದೂರು ಕೊಡಲು ಹೋದರೂ ಯಾರು ಸ್ವೀಕರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡ ಈ ಯುವಕ, ತನ್ನ ನೋವನ್ನು ವಿಡಿಯೋ ಮಾಡಿ ವಿಷ ಸೇವಿಸಿದ್ದಾನೆ.
ಇಂದು ಬೆಳಗ್ಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಆಳಂದ: ಸಾಲಬಾಧೆಯಿಂದ ಯುವ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಆಳಂದ ಠಾಣೆ ವ್ಯಾಪ್ತಿಯ ಕೋತನಹಿಪ್ಪರಗಾ ಗ್ರಾಮದಲ್ಲಿ ಮಂಗಳಾವರ ಸಂಜೆ ಘಟನೆ ನಡೆದಿದೆ.
ಗ್ರಾಮದ ಶ್ರೀಹರಿ ಶಿವಾಜಿ ಇಸ್ರಾಜಿ (32) ಎಂಬ ಯುವ ರೈತನೇ ತಮ್ಮ ಹೊಲದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತರಿಗೆ ತಂದೆ, ತಾಯಿ, ಪತ್ನಿ ಸೇರಿ ಇಬ್ಬರು ಗಂಡು, ಓರ್ವ ಹೆಣ್ಣುಮಗಳು ಇದ್ದರು. ತಂದೆ ಹೆಸರಿಗ 6 ಎಕರೆ ಜಮೀನು ಇದ್ದು ಇತನು ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿಗೆ ರಸಗೊಬ್ಬರ, ಬೀಜ ಲಾಗೋಡಿಮಾಡಿ ಲಾಭದ ಬದಲು ನಷ್ಟಅನುಭವಿಸಿದ ಅಲ್ಲದೆ, ಸಾಲಮಾಡಿ ಕ್ರೂಸರ್ ವಾಹನ ಖರೀದಿಸಿದ್ದ.
ಇಂತಹ ಖರೀದಿಗಳು, ಕೃಷಿಯ ಹಿನ್ನೆಲೆಯಲ್ಲಾದಂತಹ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೆರೆಹೊರೆಯವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಮಹಜೂರಮಾಡಿದರು, ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಶರಣು
ದಾಬಸ್‌ಪೇಟೆ: ಮಾನಸಿಕ ಅಸ್ವಸ್ಥರೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮದ ರವಿಕುಮಾರ್(32) ಆತ್ಮಹತ್ಯೆಗೊಳಗಾದವರು.
ಈತ ಅವಿವಾಹಿತನಾಗಿದ್ದು, ತಂದೆ-ತಾಯಿಯನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದರು. ಪೋಷಕರನ್ನೇ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದು ಬುಧವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ