ಭಟ್ಕಳ: ಭಿಕ್ಷಾಟನೆ ನೆಪದಲ್ಲಿ ಚಿನ್ನ, ನಗದು ದೋಚಿದ ಮಹಿಳೆ

By Kannadaprabha NewsFirst Published Mar 15, 2021, 10:40 AM IST
Highlights

ಭಿಕ್ಷಾಟನೆಗಾಗಿ ಮನೆಯೊಂದಕ್ಕೆ ಬಂದಿದ್ದ ಮಹಿಳೆ| ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಹಿರೇಹತ್ಲುವಿನಲ್ಲಿ ನಡೆದ ಘಟನೆ| ಚಿನ್ನ, ನಗದು ದೋಚಿದ ಮಹಿಳೆಯ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು| 

ಭಟ್ಕಳ(ಮಾ.15): ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬಳು ಮಾಟಮಂತ್ರದ ನೆಪದಲ್ಲಿ ಅತ್ತೆ ಸೊಸೆಯನ್ನು ಯಾಮಾರಿಸಿ ನಗದು ಮತ್ತು ಚಿನ್ನವನ್ನು ದೋಚಿಕೊಂಡು ಹೋದ ಘಟನೆ ಶಿರಾಲಿ ಹಿರೇಹತ್ಲುವಿನಲ್ಲಿ ನಡೆದಿದೆ.

ಕಳೆದ ವಾರ ಹಿರೇಹಿತ್ಲುವಿನಲ್ಲಿನ ಮನೆಯೊಂದಕ್ಕೆ ಭಿಕ್ಷಾಟನೆಗಾಗಿ ಮಹಿಳೆಯೊಬ್ಬಳು ಬಂದಿದ್ದಳು. ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿದ ಈಕೆ ನಿಮ್ಮ ಮನೆಯವರಿಗೆಲ್ಲರಿಗೂ ಗ್ರಹಚಾರವಿದೆ. ಇದಕ್ಕಾಗಿ ಪೂಜೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಜೀವಹಾನಿ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾಳೆನ್ನಲಾಗಿದೆ. 

ಅಪಘಾತ ನಾಟಕವಾಡಿ ಚಾಲಕರ ಪರ್ಸ್‌ ಎಗರಿಸುತ್ತಿದ್ದ ಖದೀಮ

ಇವಳ ಮಾತನ್ನು ನಂಬಿದ ಮನೆಯಾಕೆ ಸಂಬಂಧಿಕರ ಮನೆಗೆ ಹೋಗಿದ್ದ ತನ್ನ ಅತ್ತೆಯನ್ನು ಕರೆಯಿಸಿದ್ದಾಳೆ. ಅತ್ತೆಯ ಬಳಿಯೂ ಭಿಕ್ಷೆ ಬೇಡುವ ಮಹಿಳೆ ಇದನ್ನೇ ಹೇಳಿದ್ದು, ಪೂಜೆಗೆ 16 ಸಾವಿರ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೆ ಒಪ್ಪಿದ ಅತ್ತೆ ಸೊಸೆ ಸೊಸೈಟಿಯೊಂದರಲ್ಲಿ ಚಿನ್ನ ಅಡವಿಟ್ಟು 10 ಸಾವಿರ ತಂದಿದ್ದಲ್ಲದೇ ಮತ್ತು ಮನೆಯಲ್ಲಿದ್ದ 6 ಸಾವಿರ ರುಪಾಯಿಯನ್ನು ಸೇರಿಸಿ ಒಟ್ಟೂ 16 ಸಾವಿರ ಆಕೆಗೆ ಕೊಟ್ಟಿದ್ದಾರೆ. ಮನೆಯಲ್ಲಿ ಇಬ್ಬರನ್ನೂ ಕೂರಿಸಿ ಪೂಜೆ ಮಾಡಿಸಿದ ಭಿಕ್ಷಾಟನೆ ಮಹಿಳೆ ವಶೀಕರಣ ಮಾಡಿ ಮನೆಯಲ್ಲಿದ್ದ ಚಿನ್ನವನ್ನೂ ತನಗೆ ನೀಡುವಂತೆ ಹೇಳಿ ತೆಗೆದುಕೊಂಡಿದ್ದಾಳೆ. 

ಪೂಜೆಯ ನಂತರ ಯಾರಿಗೂ ಈ ವಿಚಾರ ಹೇಳಬೇಡಿ. ಹೇಳಿದರೆ ಮನೆಯಲ್ಲಿ ಜೀವಹಾನಿ ಖಂಡಿತ ಆಗುತ್ತದೆ. ನಾನು ಐದು ದಿನಗಳ ನಂತರ ಮತ್ತೆ ಬರುತ್ತೇನೆಂದು ಹೇಳಿ ಕಾಲ್ಕಿತ್ತಿದ್ದಾಳೆ. ಐದು ದಿನಗಳ ನಂತರ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಅತ್ತೆ, ಸೊಸೆಗೆ ಆಕೆ ಬರದೇ ಇದ್ದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆಯ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರು ಮಾಹಿತಿ ಪಡೆದಿದ್ದು, ಚಿನ್ನ, ನಗದು ದೋಚಿದ ಮಹಿಳೆಯ ಪತ್ತೆ ಕಾರ್ಯ ಆರಂಭಿಸಿದ್ದಾರೆ.
 

click me!