Cyber Crime: ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದೀರಾ? ಈ ವಿಷಯ ತಿಳ್ಕೊಳ್ಳಿ, ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌ ಆಗೋದು ಯಾಕೆ?

Published : Jun 14, 2025, 06:04 PM IST
cyber crime

ಸಾರಾಂಶ

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಸಂಬಂಧವಿಲ್ಲದವರ ಖಾತೆಗಳು ಲೀನ್‌ ಆಗುತ್ತಿವೆ. ಇದರಿಂದ ಅಮಾಯಕರು ತೊಂದರೆ ಅನುಭವಿಸುತ್ತಿದ್ದಾರೆ. ಖಾತೆಗಳನ್ನು ಸರಿಪಡಿಸಲು ಸೈಬರ್‌ ಠಾಣೆಗಳಿಗೆ ಅಲೆದಾಡುವಂತಾಗಿದೆ.

ಸಂದೀಪ್‌ ವಾಗ್ಲೆ

ಮಂಗಳೂರು (ಜೂ.14) : ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂಥ ಅಪರಾಧಗಳಿಗೆ ಸಂಬಂಧವೇ ಇಲ್ಲದ ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳ ಬ್ಯಾಂಕ್‌ ಖಾತೆಗಳು ಕೂಡ ಲೀನ್‌, ಫ್ರೀಜ್‌ಗೆ ಒಳಗಾಗುತ್ತಿದ್ದು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ. ರಾಜ್ಯಾದ್ಯಂತ ಸಹಸ್ರಾರು ಮಂದಿ ಇದರಿಂದ ಬವಣೆಪಡುತ್ತಿದ್ದಾರೆ.

ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಬೇಕಾದದ್ದು ನ್ಯಾಯ ಸಮ್ಮತ. ಆದರೆ ಅನೇಕ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಗಳು ಕೂಡ ಬಲಿಪಶುವಾಗುತ್ತಿದ್ದಾರೆ. ಇದರಿಂದ ಅಮಾಯಕ ಬ್ಯಾಂಕ್‌ ಗ್ರಾಹಕರು ಹಣಕಾಸು ವಹಿವಾಟು ಮಾಡಲು ಸಾಧ್ಯವಾಗದೆ, ಲೀನ್ ಅಥವಾ ಫ್ರೀಜ್‌ ಆದ ತಮ್ಮ ಖಾತೆಗಳನ್ನು ಸರಿಪಡಿಸಲು ಸೈಬರ್‌ ಕ್ರೈಂ ಠಾಣೆಗಳಿಗೆ ಅಲೆದಾಡುವಂತಾಗಿದೆ. ಬಹುದೊಡ್ಡ ಸಂಖ್ಯೆಯ ಜನರು ತೊಂದರೆಗೆ ಈಡಾಗುತ್ತಿದ್ದಾರೆ.

ಉದ್ಯಮಿಗಳಿಂದ ಹಿಡಿದು ಎಳನೀರು ಮಾರುವವರೆಗೆ ಸಣ್ಣಪುಟ್ಟ ಮೊತ್ತಗಳಿಗೂ ಖಾತೆಯೇ ಫ್ರೀಜ್, ಲೀನ್ ಆಗುತ್ತಿರುವ ಕಾರಣ ಜನರು ಬ್ಯಾಂಕಿಂಗ್ ವ್ಯವಹಾರ ಎಂದರೆ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ.

ಏನಿದು ಸಮಸ್ಯೆ?:

ಸೈಬರ್‌ ಅಪರಾಧ ನಡೆದಾಗ ಸಾಮಾನ್ಯವಾಗಿ 1930 ರಾಷ್ಟ್ರೀಯ ಸಹಾಯವಾಣಿಗೆ ಅಥವಾ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡುತ್ತಾರೆ. ತಕ್ಷಣ ಹಣ ವರ್ಗಾವಣೆಯಾದ ಖಾತೆಗಳನ್ನು ಪತ್ತೆ ಹಚ್ಚಿ, ಆ ಖಾತೆಗಳೊಂದಿಗೆ ಹಣಕಾಸಿನ ಸಂಪರ್ಕ ಹೊಂದಿರುವ ಇತರ ಖಾತೆಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವುದು ಅಥವಾ ಲೀನ್ ಮಾಡಲಾಗುತ್ತದೆ. ಲೀನ್‌ ಎಂದರೆ ಸಂಶಯಾಸ್ಪದ ಮೊತ್ತವನ್ನು ತಡೆಹಿಡಿಯುವುದು. ಇದರಲ್ಲಿ ಅಮಾಯಕ ಗ್ರಾಹಕರು ಕೂಡ ಸಿಲುಕಿಕೊಳ್ಳುತ್ತಿದ್ದಾರೆ.

ಅಮಾಯಕರು ಸಿಲುಕುವುದು ಹೇಗೆ?:

ಸೈಬರ್‌ ಅಪರಾಧ ಮಾಡುವವರು ಕಪ್ಪು ಹಣವನ್ನು ಬಿಳಿ ಮಾಡಲು ಹವಣಿಸುತ್ತಾರೆ. ಅದಕ್ಕಾಗಿ ತಮ್ಮ ಸಂಪರ್ಕದಲ್ಲಿರುವ ಖಾತೆಗಳಿಗೆ ಹಣ ಕಳುಹಿಸುವುದು, ಮುಖ್ಯವಾಗಿ ವ್ಯಾಪಾರಿಗಳು, ಉದ್ಯಮಿಗಳು, ಜನಸಾಮಾನ್ಯರ ಮೂಲಕ ಅದನ್ನು ಸಾಧಿಸುತ್ತಾರೆ. ಕೆಲವೊಮ್ಮ ಮಾಹಿತಿ ಸೋರಿಕೆ ಆಗಿರುವ ಬ್ಯಾಂಕ್‌ ಖಾತೆಗಳ ವಿವರ ಪಡೆದು ಆ ಅನಾಮಿಕ ಖಾತೆಗಳ ಮೂಲಕ ವ್ಯವಹಾರ ನಡೆಸುತ್ತಾರೆ. ದೂರು ದಾಖಲಾದ ತಕ್ಷಣ ಈ ಎಲ್ಲ ಖಾತೆಗಳು ಲೀನ್‌ ಅಥವಾ ಸೀಜ್‌ ಆಗುತ್ತವೆ. ಅಷ್ಟೊತ್ತಿಗಾಗಲೇ ಅಮಾಯಕರು ಮೋಸದ ಬಲೆಯಲ್ಲಿ ಸಿಲುಕಿ ಆಗಿರುತ್ತದೆ.

ಠಾಣೆಗೆ ಅಲೆದಾಟ ತಪ್ಪಿದ್ದಲ್ಲ:

ಬ್ಯಾಂಕ್‌ ಖಾತೆಗಳನ್ನು ಲೀನ್‌ ಅಥವಾ ಸೀಜ್‌ ಮಾಡಿದ ಬಳಿಕ ಸೈಬರ್‌ ಕ್ರೈಮ್‌ ಪೊಲೀಸರು ದೂರು ಪ್ರತಿಯೊಂದಿಗೆ ಈ ಖಾತೆಗಳ ವಿವರಗಳನ್ನು ಬ್ಯಾಂಕ್‌ಗೆ ಕಳುಹಿಸಿ ಕೊಡುತ್ತಾರೆ. ಮೋಸಕ್ಕೆ ಒಳಗಾದ ಅಮಾಯಕರು ತಮ್ಮ ಖಾತೆ ಲೀನ್‌ ಅಥವಾ ಸೀಜ್‌ ಆಗಿರುವುದನ್ನು ಸರಿಪಡಿಸಲು ಆಯಾ ಸೈಬರ್‌ ಅಪರಾಧ ನಡೆದ ಪ್ರದೇಶ- ಅದು ದೆಹಲಿ, ಮುಂಬೈ, ಬೆಂಗಳೂರು ಎಲ್ಲೇ ಆಗಿರಲಿ, ಅಲ್ಲಿನ ಸೈಬರ್‌ ಠಾಣೆಯ ತನಿಖಾಧಿಕಾರಿಯನ್ನು ಸಂಪರ್ಕಿಸಿ ಸಂಬಂಧಿಸಿದ ದಾಖಲೆಗಳನ್ನು ನೀಡಿ ತಾನು ಅಮಾಯಕ ಎನ್ನುವುದನ್ನು ಮನವರಿಕೆ ಮಾಡಬೇಕು. ತನಿಖಾಧಿಕಾರಿಗೆ ಮನವರಿಕೆಯಾದರೆ ಲಿಖಿತವಾಗಿ ಬ್ಯಾಂಕ್‌ಗೆ ಲೀನ್‌ ಅಥವಾ ಫ್ರೀಜ್‌ ಮಾಡಿದ್ದನ್ನು ತೆಗೆಯುವಂತೆ ತಿಳಿಸುತ್ತಾರೆ. ಅಷ್ಟೊತ್ತಿಗೆ ಕೆಲವು ತಿಂಗಳು, ವರ್ಷಗಳೇ ಕಳೆಯಬಹುದು. ಖಾತೆ ಫ್ರೀಜ್‌ ಆದರಂತೂ ಕೋರ್ಟ್‌ನಲ್ಲೇ ತೀರ್ಮಾನ ಆಗಬೇಕು.

ಭ್ರಷ್ಟಾಚಾರಕ್ಕೆ ರಹದಾರಿ:

ಲೀನ್‌ ಅಥವಾ ಫ್ರೀಜ್‌ ಆದ ಬ್ಯಾಂಕ್‌ ಖಾತೆಯನ್ನು ಸರಿಪಡಿಸುವ ಪ್ರಕ್ರಿಯೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅನೇಕ ಗ್ರಾಹಕರು ದೂರಿದ್ದಾರೆ. ಕೆಲವು ಬ್ಯಾಂಕ್‌ನವರು ತಾವೇ ಸರಿಪಡಿಸುವ ಭರವಸೆ ನೀಡಿ ಲಂಚ ಪಡೆದುಕೊಳ್ಳುವ ಆರೋಪಗಳೂ ಕೇಳಿಬಂದಿವೆ.

ನಮಗೇಕೆ ತೊಂದರೆ

ಇತ್ತೀಚೆಗೆ ಮಂಗಳೂರಿನ ನನ್ನ ಬ್ಯಾಂಕ್‌ ಖಾತೆಯಲ್ಲಿದ್ದ ಮೊತ್ತವನ್ನು ತೆಗೆಯಲು ಸಾಧ್ಯವಾಗಿಲ್ಲ. ಬ್ಯಾಂಕಿಗೆ ಹೋಗಿ ಕೇಳಿದರೆ ಖಾತೆ ಲೀನ್‌ ಆಗಿದೆ ಎನ್ನುವ ಉತ್ತರ ಕೊಟ್ಟಿದ್ದಾರೆ. ಸೈಬರ್‌ ಠಾಣೆಗೆ ಹೋಗಿ ಕ್ಲಿಯರೆನ್ಸ್‌ ತಾರದೆ ಲೀನ್‌ ತೆಗೆಸಲು ಆಗಲ್ಲ ಎಂದಿದ್ದಾರೆ. ಸೈಬರ್‌ ಪೊಲೀಸರು ದಾಖಲೆಗಳನ್ನು ಕೇಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಾವ್ಯಾಕೆ ತೊಂದರೆಗೆ ಒಳಗಾಗಬೇಕು?

-ಮಂಗಳೂರಿನ ವ್ಯಾಪಾರಿ, ಬ್ಯಾಂಕ್‌ ಗ್ರಾಹಕ

ಠಾಣೆಗೆ ಭೇಟಿ ನೀಡಿ

ಬ್ಯಾಂಕ್‌ ಖಾತೆ ಲೀನ್‌ ಅಥವಾ ನಿಷ್ಕ್ರಿಯವಾದರೆ ಮೊದಲು ಬ್ಯಾಂಕನ್ನು ಸಂಪರ್ಕಿಸಬೇಕು. ಅಲ್ಲಿ ಆಯಾ ಪ್ರಕರಣಕ್ಕೆ ಸಂಬಂಧಿಸಿದ ಕ್ರೈಂ ಸಂಖ್ಯೆ, ತನಿಖಾಧಿಕಾರಿಯ ವಿಳಾಸ, ಫೋನ್‌ ಸಂಖ್ಯೆ, ಇ-ಮೇಲ್‌ ವಿಳಾಸ ನೀಡುತ್ತಾರೆ. ಬಳಿಕ ಇ-ಮೇಲ್‌ ಅಥವಾ ಮೊಬೈಲ್‌ ಕರೆಯ ಮೂಲಕ ತನಿಖಾಧಿಕಾರಿಯನ್ನು ಸಂಪರ್ಕಿಸಿ ತಾನು ಅಮಾಯಕ ಎನ್ನುವುದನ್ನು ಮನವರಿಕೆ ಮಾಡಬೇಕು. ಇಲ್ಲವೇ ಸಮೀಪದ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ ಸಲಹೆ ಪಡೆದು ಮುಂದುವರಿಯಬಹುದು.

-ಎಂ.ಪಿ.ಸತೀಶ್‌, ಇನ್‌ಸ್ಪೆಕ್ಟರ್‌, ಮಂಗಳೂರು ಸೆನ್‌ ಕ್ರೈಮ್‌ ಪೊಲೀಸ್‌ ಠಾಣೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ