ಅನೈತಿಕ ಸಂಬಂಧ: ವಿಷ ಸೇವಿಸಿ ಪ್ರಿಯಕರ ಸಾವು| ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ| ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬಂಡ್ರಿ ಗ್ರಾಮದಲ್ಲಿ ನಡೆದ ಘಟನೆ| ವಿವಾಹಿತರಿಬ್ಬರೂ ಅನೈತಿಕ ಸಂಬಂಧ ಇಟ್ಟುಕೊಂಡು ಊರು ಬಿಟ್ಟು ಹೋಗಿದ್ದರು|
ಕೂಡ್ಲಿಗಿ(ಮೇ.25): ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಪ್ರಿಯಕರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಹಿಳೆ ತೀವ್ರ ಅಸ್ವಸ್ಥಳಾಗಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಡೂರು ತಾಲೂಕು ಬಂಡ್ರಿ ಗ್ರಾಮದ ಹತ್ತಿರ ಭಾನುವಾರ ಬೆಳಿಗ್ಗೆ ನಡೆದಿದೆ.
ಬಂಡ್ರಿ ಸಮೀಪದ ಕೆ. ಗೊಲ್ಲರಹಟ್ಟಿ ಗ್ರಾಮದ ಮುದ್ದಪ್ಪ(36) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ. ಈತನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅದೇ ಗ್ರಾಮದ 30 ವರ್ಷದ ವಿವಾಹಿತ ಮಹಿಳೆ ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥಳಾಗಿದ್ದರಿಂದ ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೆಂಡ್ತಿ ನಡವಳಿಕೆಯಿಂದ ಬೇಸತ್ತ ಗಂಡ: ಸೆಲ್ಫಿ ವಿಡಿಯೋ ಮಾಡಿ ತಂದೆ ಮಗಳು ನೇಣಿಗೆ ಶರಣು
2 ದಿನಗಳ ಹಿಂದೆ ಈ ಇಬ್ಬರು ಊರು ಬಿಟ್ಟು ಹೋಗಿದ್ದರು. ವಿವಾಹಿತರಿಬ್ಬರೂ ಅನೈತಿಕ ಸಂಬಂಧ ಇಟ್ಟುಕೊಂಡು ಊರು ಬಿಟ್ಟು ಹೋಗಿದ್ದರು. ಈ ವಿಷಯ ವಿವಾಹಿತ ಮಹಿಳೆಯ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಶನಿವಾರ ರಾತ್ರಿ ತಮ್ಮೂರಿಗೆ ಹತ್ತಿರವಿರುವ ಬಂಡ್ರಿ ಸಮೀಪದ ಸಣ್ಣಕೆರೆಯ ಹತ್ತಿರವಿರುವ ತಿಮ್ಮಪ್ಪನ ಗುಡ್ಡದ ಬಳಿ ಬಂದಿದ್ದಾರೆ. ಊರಿಗೆ ಹೋದರೆ ಜನತೆಯ ಮುಂದೆ ಹೇಗೆ ಜೀವನ ಮಾಡುವುದು ಎಂದು ಮರ್ಯಾದೆಗೆ ಅಂಜಿ ಇಬ್ಬರು ವಿಷ ಸೇವಿಸಿದ್ದಾರೆ. ಅದರಲ್ಲಿ ಪ್ರಿಯಕರ ಸಾವನ್ನಪ್ಪಿದ್ದಾನೆ. ಭಾನುವಾರ ಬೆಳಗ್ಗೆ ಬಂಡ್ರಿ ಗ್ರಾಮದ ಜನತೆ ಇದನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.