ಈಜಿಪುರದ ಸಮೀರ್ ಅಹಮ್ಮದ್ ಹಾಗೂ ಶಿವ ಅಲಿಯಾಸ್ ಜೇಮ್ಸ್ ಬಂಧಿತರಾಗಿದ್ದು, ಆರೋಪಿಗಳಿಂದ .2 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣ ಜಪ್ತಿ.
ಬೆಂಗಳೂರು(ಡಿ.27): ಮಸಾಜ್ ನೆಪದಲ್ಲಿ ಲೈಂಗಿಕ ಅಲ್ಪಸಂಖ್ಯಾತಳ ಮನೆಗೆ ತೆರಳಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಜಿಪುರದ ಸಮೀರ್ ಅಹಮ್ಮದ್ ಹಾಗೂ ಶಿವ ಅಲಿಯಾಸ್ ಜೇಮ್ಸ್ ಬಂಧಿತರಾಗಿದ್ದು, ಆರೋಪಿಗಳಿಂದ .2 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೋರಮಂಗಲದ ವೆಂಕಟಸ್ವಾಮಿ ಲೇಔಟ್‌ನಲ್ಲಿ ಸಂತಸ್ತೆ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ದೂರುದಾಳ ಮನೆಗೆ ಮಸಾಜ್‌ಗೆ ಬಂದಿದ್ದ ಶಿವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಆತನ ನೀಡಿದ ಮಾಹಿತಿ ಮೇರೆಗೆ ಸಮೀರ್ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತು ಭರಿಸುವ ಮದ್ದು ಕೊಟ್ಟು ಕಳ್ಳತನ:
ಈಜಿಪುರದ ಸಮೀರ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಆತನ ಮೇಲೆ ವಿವೇಕನಗರ ಹಾಗೂ ಕೋರಮಂಗಲ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೋರಮಂಗಲದ ವೆಂಕಟಸ್ವಾಮಿ ಲೇಔಟ್‌ನಲ್ಲಿ ಮನೆಯಲ್ಲೇ ಮಸಾಜ್ ಕೇಂದ್ರವನ್ನು ಈಶಾನ್ಯ ರಾಜ್ಯ ಮೂಲದ ಸಂತ್ರಸ್ತೆ ನಡೆಸುತ್ತಿದ್ದು, ಹಲವು ದಿನಗಳಿಂದ ಆಕೆಗೆ ಸಮೀರ್ ಪರಿಚಯವಿತ್ತು. ಆಗಾಗ್ಗೆ ಮಸಾಜ್‌ಗೆ ಆತ ಬಂದು ಹೋಗುತ್ತಿದ್ದ. ಇದರಿಂದ ಸಂತ್ರಸ್ತೆಯ ಆರ್ಥಿಕ ವಹಿವಾಟಿನ ಬಗ್ಗೆ ಸಮೀರ್ ತಿಳಿದುಕೊಂಡಿದ್ದ. ಇತ್ತೀಚೆಗೆ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಮೀರ್, ಸಂತ್ರಸ್ತೆ ಬಳಿ ಹಣ ಹಾಗೂ ಚಿನ್ನ ಕಳವು ಮಾಡಲು ಯೋಜಿಸಿದ್ದ. ಇದಕ್ಕೆ ಪಾಂಡಿಚೇರಿ ಮೂಲದ ಶಿವ ಸಾಥ್ ಕೊಟ್ಟಿದ್ದಾನೆ. ತಾನು ಕಳ್ಳತನ ಎಸಗಿದರೆ ಪೊಲೀಸರಿಗೆ ಸಿಕ್ಕಿಬೀಳುತ್ತೇನೆ ಎಂದು ಎಚ್ಚರಿಕೆವಹಿಸಿದ್ದ ಸಮೀರ್, ಸಂತ್ರಸ್ತೆಯ ಮನೆಗೆ ಮಸಾಜ್ ನೆಪದಲ್ಲಿ ತನ್ನ ಸಹಚರ ಶಿವನನ್ನು ಕಳುಹಿಸಿ ಹಣ ಹಾಗೂ ಆಭರಣ ಕಳವು ಮಾಡಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಪೂರ್ವಯೋಜಿತ ಸಂಚಿನಂತೆ ನ.25ರಂದು ಮಸಾಜ್ ನೆಪದಲ್ಲಿ ದೂರುದಾಳ ಮನೆಗೆ ಶಿವ ಬಂದಿದ್ದ. ಬಳಿಕ ಎರಡು ದಿನ ಆಕೆಯ ಮನೆಯಲ್ಲೇ ತಂಗಿದ್ದ ಶಿವ, ಆ ವೇಳೆ ತಂಪು ಪಾನೀಯದಲ್ಲಿ ಮತ್ತು ಭರಿಸುವ ಮದ್ದು ಬೆರೆಸಿ ಸಂತ್ರಸ್ತೆಗೆ ಕುಡಿಸಿದ್ದ. ಇದಾದ ಬಳಿಕ ಲೈಂಗಿಕ ಅಲ್ಪಸಂಖ್ಯಾತೆ ಪ್ರಜ್ಞೆ ತಪ್ಪಿದಾಗ ಆಕೆಯ ಮನೆಯಲ್ಲಿ 120 ಗ್ರಾಂ ಚಿನ್ನ ಹಾಗೂ ಎಟಿಎಂ ಕಾರ್ಡ್ ಕದ್ದ ಶಿವ, ಆಕೆಯ ಮನೆ ಬಳಿಗೆ ಸಮೀರ್‌ನನ್ನು ಕರೆಸಿಕೊಂಡು ಆತನಿಗೆ ಕೊಟ್ಟು ಕಳುಹಿಸಿದ್ದ. ಈ ಕೃತ್ಯ ಎಸಗಿದ ಬಳಿಕ ಒಂದು ದಿನ ಆಕೆಯ ಮನೆಯಲ್ಲೇ ಇದ್ದು ಮರುದಿನ ಆತ ತೆರಳಿದ್ದ. ಡಿ.3ರಂದು ಆಭರಣ ಹಾಗೂ ಎಟಿಎಂ ಕಳ್ಳತನವಾಗಿರುವುದು ಸಂತ್ರಸ್ತೆಗೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾತಿನಲ್ಲೇ ಉದ್ಯಮಿಗಳ ಮರಳು ಮಾಡೋ ಖತರ್ನಾಕ್ ಕಾರ್ ಕಳ್ಳ ಬಂಧನ
ಕೂಡಲೇ ಆಡುಗೋಡಿ ಠಾಣೆಗೆ ತೆರಳಿ ದೂರು ನೀಡಿದ ಆಕೆ, ನನ್ನ ಮನೆಗೆ ಶಿವ ಎಂಬಾತ ಬಂದು ಹೋದ ನಂತರ ಯಾರೊಬ್ಬರು ಬಂದಿಲ್ಲ. ಹೀಗಾಗಿ ಆತನೇ ಕಳ್ಳತನ ಮಾಡಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದಳು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು, ಮೊಬೈಲ್ ಕರೆಗಳನ್ನಾಧರಿಸಿ ಶಿವನನ್ನು ಪತ್ತೆ ಹಚ್ಚಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತೆಯ ಮನೆಯಲ್ಲಿ ಕಳ್ಳತನಕ್ಕೆ ಸಮೀರ್ ಸಂಚು ರೂಪಿಸಿದ್ದ. ಆತನಿಗೆ ನಾನು ಸಹಕರಿಸಿದ್ದೇನೆ ಎಂದು ವಿಚಾರಣೆ ವೇಳೆ ಶಿವ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಇತ್ತ ತಾನು ಸಾಲ ತೀರಿಸಲು ಕಳ್ಳತನಕ್ಕೆ ಸಂಚು ರೂಪಿಸಿದ್ದಾಗಿ ಸಮೀರ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
30 ಗ್ರಾಂ ಚಿನ್ನ ಖರೀದಿಸಿದ್ರು
ಸಂತ್ರಸ್ತೆಯ ಡೆಬಿಟ್ ಕಾರ್ಡ್ ಬಳಸಿ ಆರೋಪಿಗಳು ಡ್ರಾ ಮಾಡಿದ್ದ .5 ಲಕ್ಷದಲ್ಲಿ .2 ಲಕ್ಷವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಆರೋಪಿಗಳಿಂದ 150 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರಲ್ಲಿ 120 ಗ್ರಾಂ ಸಂತ್ರಸ್ತೆಯ ಮನೆಯಲ್ಲಿ ಕಳ್ಳತವಾಗಿತ್ತು. ಇನ್ನುಳಿದ ಸಂತ್ರಸ್ತೆಯ ಎಟಿಎಂ ಕಾರ್ಡ್ ಬಳಸಿ ಪಡೆದಿದ್ದ ಹಣದಲ್ಲಿ 30 ಗ್ರಾಂ ಚಿನ್ನವನ್ನು ಆರೋಪಿಗಳು ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.