ಸಾಲ ಮಂಜೂರು ಮಾಡಿಸಲಿಲ್ಲ ಎಂದು ಮ್ಯಾನೇಜರ್‌ ಮನೆಯಲ್ಲಿ ದರೋಡೆ!

Kannadaprabha News   | Asianet News
Published : Sep 05, 2020, 07:57 AM IST
ಸಾಲ ಮಂಜೂರು ಮಾಡಿಸಲಿಲ್ಲ ಎಂದು ಮ್ಯಾನೇಜರ್‌ ಮನೆಯಲ್ಲಿ ದರೋಡೆ!

ಸಾರಾಂಶ

ಮನೆಗೆ ನುಗ್ಗಿ ಮ್ಯಾನೇಜರ್‌ ಪತ್ನಿ ಕೈ-ಕಾಲು ಕಟ್ಟಿ ಕೃತ್ಯ ಮೂವರ ಬಂಧನ|ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ 6.50 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ಜಪ್ತಿ| ಕೃತ್ಯ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು| 

ಬೆಂಗಳೂರು(ಸೆ.05):  ಸಾಲ ಮಂಜೂರಾತಿ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಎಲ್‌ಐಸಿ ಹೌಸಿಂಗ್‌ ಕಂಪೆನಿಯ ಮ್ಯಾನೇಜರ್‌ವೊಬ್ಬರ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳು ಇದೀಗ ಕೆ.ಆರ್‌.ಪುರಂ ಪೊಲೀಸರ ಅತಿಥಿಯಾಗಿದ್ದಾರೆ.

ವಿ.ಬಿ.ಲೇಔಟ್‌ ನಿವಾಸಿ ಶಿವಕುಮಾರ್‌ (37), ಅತಿಥಿ ಬಡಾವಣೆ ನಿವಾಸಿಗಳಾದ ಸಿದ್ಧಾರ್ಥ (25) ಮತ್ತು ಡೇವಿಡ್‌ ಅಲಿಯಾಸ್‌ ಬುದ್ಧ ನೇಷನ್‌ (32) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ 6.50 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜು ತಿಳಿಸಿದ್ದಾರೆ.

ಮಾದಕ ವಸ್ತು ಮಾರಾಟಕ್ಕೆ ಯತ್ನ: ವಿದೇಶಿ ಪ್ರಜೆಗಳ ಬಂಧನ

ಮೂವರು ಆರೋಪಿಗಳು ಮೂಲತಃ ತಮಿಳುನಾಡಿನವರು. ಶಿವಕುಮಾರ್‌ ಐಡಿಎಫ್‌ಸಿ ಬ್ಯಾಂಕಿನಲ್ಲಿ ಫೀಲ್ಡ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡಿಕೊಂಡಿದ್ದ. ಲಾಕ್‌ಡೌನ್‌ನಿಂದಾಗಿ ಶಿವಕುಮಾರ್‌ ಕೆಲಸ ಕಳೆದುಕೊಂಡಿದ್ದು, ಲಕ್ಷಾಂತರ ರುಪಾಯಿ ಕೈ ಸಾಲ ಮಾಡಿಕೊಂಡಿದ್ದ. ಈ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಸ್ನೇಹಿತ ಬಾಲಾಜಿ ಬಳಿ 10 ಲಕ್ಷ ಸಾಲ ಕೊಡಿಸುವಂತೆ ಕೇಳಿಕೊಂಡಿದ್ದ.

ಬಾಲಾಜಿ ತನ್ನ ಪರಿಚಯಸ್ಥ ಎಲ್‌ಐಸಿ ಹೌಸಿಂಗ್‌ ಕಂಪನಿಯ ಮ್ಯಾನೇಜರ್‌ ಭಾಸ್ಕರ್‌ ಎಂಬುವರನ್ನು ಪರಿಚಯಸಿದ್ದ. ಆದರೆ ಸೂಕ್ತ ದಾಖಲೆ ಇಲ್ಲದ ಕಾರಣ ಸಾಲ ಮಂಜೂರಾತಿ ಆಗಿರಲಿಲ್ಲ. ಇದೇ ವಿಚಾರಕ್ಕೆ ಆರೋಪಿ ಶಿವಕುಮಾರ್‌, ಎಸ್‌ಐಸಿಯ ಮ್ಯಾನೇಜರ್‌ ಭಾಸ್ಕರ್‌ ಮೇಲೆ ಆಕ್ರೋಶಗೊಂಡಿದ್ದ. ಭಾಸ್ಕರ್‌ ಅವರ ಮನೆ ನೋಡಿದ್ದ ಆರೋಪಿ ಕಳವು ಮಾಡಬೇಕು ಎಂದು ಸಂಚು ರೂಪಿಸಿದ್ದ.

ಆ.18ರಂದು ರಾತ್ರಿ ಸ್ನೇಹಿತ ಡೇವಿಡ್‌ ಮತ್ತು ಸಿದ್ಧಾಥ್‌ರ್‍ ಜತೆ ಶಿವಕುಮಾರ್‌ ಮದ್ಯ ಸೇವಿಸಿದ್ದ. ನಂತರ ಭಾಸ್ಕರ್‌ ಮನೆಯಲ್ಲಿ ಹಣ ದೋಚುವ ಬಗ್ಗೆ ಹೇಳಿದ್ದ. ಇದಕ್ಕೆ ಇಬ್ಬರು ಆರೋಪಿಗಳು ಬೆಂಬಲಿಸಿದ್ದರು. ಮರುದಿನ ಬೆಳಗ್ಗೆ ಭಾಸ್ಕರ್‌ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಪತ್ನಿಯೊಬ್ಬರೇ ಇರುವುದನ್ನು ತಿಳಿದುಕೊಂಡಿದ್ದರು. ಬೆಳಗ್ಗೆ 11 ಗಂಟೆಯಲ್ಲಿ ಕೊರಿಯರ್‌ ಬಾಯ್‌ ಸೋಗಿನಲ್ಲಿ ಮನೆ ಬಳಿ ಹೋಗಿದ್ದರು. ಭಾಸ್ಕರ್‌ ಪತ್ನಿ ಬಾಗಿಲು ತೆರೆಯುತ್ತಿದ್ದಂತೆ, ಡ್ರ್ಯಾಗರ್‌ ತೋರಿಸಿ ಒಳಗೆ ನುಗ್ಗಿದ ಆರೋಪಿಗಳು ಮಹಿಳೆಯ ಕೈಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆತುರುಕಿದ್ದರು. ಬಳಿಕ ಮನೆಯಲ್ಲಿದ್ದ 1.6 ಲಕ್ಷ ನಗದು ಹಾಗೂ 170 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ದರೋಡೆ ನಡೆದ ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು. ಈ ಸಿಸಿಟಿವಿ ದೃಶಾವಳಿ ನೋಡಿದ ಮ್ಯಾನೇಜರ್‌ ಆರೋಪಿಗಳನ್ನು ಗುರುತಿಸಿದ್ದರು. ಆರೋಪಿಗಳು, ಕೃತ್ಯ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಫೋನ್‌ ನಂಬರ್‌ ಲೊಕೇಷನ್‌ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!