
ಬೆಂಗಳೂರು (ಮೇ.21): ಮನೆಗಳವು ಮಾಡಿ ಸಂಪಾದಿಸಿದ ಹಣದಲ್ಲಿ ತನ್ನ ಸ್ನೇಹಿತರಿಗೆ ಆಟೋ ಹಾಗೂ 20 ಮಕ್ಕಳ ವಿದ್ಯಾಭ್ಯಾಸಕ್ಕಾಗಿ 14 ಲಕ್ಷ ರು.ಗಳನ್ನು ನೆರವು ನೀಡಿದ್ದ ‘ಆಧುನಿಕ ರಾಬಿನ್‌ಹುಡ್’ ಹಾಗೂ ಆತನ ಇಬ್ಬರು ಸಹಚರರು ಈಗ ಸೆಂಟ್ರಲ್ ಜೈಲು ಸೇರಿದ್ದಾರೆ.
ಬೆಂಗಳೂರಿನ ಬೇಗೂರು ನಿವಾಸಿ ಶಿವರಸನ್ ಅಲಿಯಾಸ್ ಶಿವು, ಆತನ ಸಹಚರರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕಾನಂದ ಅಲಿಯಾಸ್ ಬಂಧಿತರಾಗಿದ್ದು, ಆರೋಪಿಗಳಿಂದ 24 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ಆಟೋ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬ್ಯಾಡರಹಳ್ಳಿ ಸಮೀಪದ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಶಿವು ಗ್ಯಾಂಗ್ ಅನ್ನು ಸೆರೆ ಹಿಡಿದು ವಿಚಾರಣೆಗೊಳಪಡಿಸಿದಾಗ ಆತನ ಪರೋಪಕಾರಿ ಅವತಾರ ಬಯಲಾಗಿದೆ.
ಕೊಡುಗೈ ದಾನಿಯಾದ ಮನೆಗಳ್ಳ: ತಮಿಳುನಾಡು ಮೂಲದ ಶಿವು ಕುಟುಂಬ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿತ್ತು. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತ, ತರುವಾಯ ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ಹಿಡಿದಿದ್ದಾನೆ. ಮನೆಗಳ್ಳತನವನ್ನೇ ವೃತ್ತಿಯಾಗಿಸಿಕೊಂಡ ಶಿವು ವಿರುದ್ಧ ನಗರದ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ಜಿಗಣಿ ಸೇರಿದಂತೆ ಇತರೆ ಠಾಣೆಗಳಲ್ಲಿ 10ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮನೆಗಳ್ಳತನಕ್ಕೆ ಕುಖ್ಯಾತನಾಗಿದ್ದ ಆತ, ತಾನು ಕಳ್ಳತನದಲ್ಲಿ ಸಂಪಾದಿಸಿದ್ದ ಹಣದಲ್ಲಿ ಸ್ಪಲ್ಪ ಹಣವನ್ನು ಜನರಿಗೆ ದಾನ ಮಾಡಿ ಕೊಡುಗೈ ದಾನಿ ಹಾಗೂ ರಾಬಿನ್‌ಹುಡ್ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕೈಗಾ ಅಣು ಸ್ಥಾವರ ಸ್ಥಾಪಿಸಿದ್ದ ವಿಜ್ಞಾನಿ ಶ್ರೀನಿವಾಸನ್ ನಿಧನ
ಅಂತೆಯೇ ಬ್ಯಾಡರಹಳ್ಳಿ ಸಮೀಪ ಮನೆ ಬೀಗ ಮುರಿದು 240 ಗ್ರಾಂ ಚಿನ್ನವನ್ನು ಶಿವು ಕಳವು ಮಾಡಿದ್ದ. ನಂತರ ಆ ಚಿನ್ನವನ್ನು ತಮಿಳುನಾಡಿನಲ್ಲಿ ತನ್ನ ಗೆಳೆಯ ವಿವೇಕಾನಂದ ಮೂಲಕ ವಿಲೇವಾರಿ ಮಾಡಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ತನ್ನ ಇಬ್ಬರು ಸ್ನೇಹಿತರಿಗೆ ಹೊಸ ಆಟೋ ಹಾಗೂ ತನ್ನ ಪರಿಚಿತರ ಸುಮಾರು 20 ಮಕ್ಕಳ ಶಾಲಾ ಶುಲ್ಕ ಪಾವತಿಸಲು ಶಿವು 14 ಲಕ್ಷ ರು. ನೆರವು ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ