ಶಿವಮೊಗ್ಗದಲ್ಲಿ ಸ್ಥಳ ಮಹಜರು ಬಳಿಕ ಶಾರೀಕ್‌ನ್ನು ಎನ್‌ಐಎ ತಂಡ ಮಂಗಳೂರಿಗೆ ಕರೆತರಲಿದೆ. ಮಂಗಳೂರಿನ ಕಂಕನಾಡಿಯ ಘಟನಾ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಿದೆ. ಇಡೀ ಘಟನೆಯ ರೀ ಟೇಕ್ ಮಾಡಿಸುವ ಸಾಧ್ಯತೆ ಇದೆ.
ಮಂಗಳೂರು(ಮಾ.11): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ವಶದಲ್ಲಿರುವ ಆರೋಪಿ ಶಿವಮೊಗ್ಗದ ಶಾರೀಕ್‌ನ್ನು ಸ್ಥಳ ಮಹಜರು ಪ್ರಕ್ರಿಯೆಗೆ ಮಂಗಳೂರಿಗೆ ಕರೆತರುವ ಸಾಧ್ಯತೆ ಇದೆ.
ನವೆಂಬರ್ 10ರಂದು ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದು, ಈ ಘಟನೆಯಲ್ಲಿ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಸಹಿತ ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರೀಕ್(24) ಗಂಭೀರ ಗಾಯಗೊಂಡಿದ್ದ. ಒಂದು ತಿಂಗಳ ಚಿಕಿತ್ಸೆ ಬಳಿಕ ಶಾರೀಕ್‌ನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರು. ಈಗ ಶಾರೀಕ್ ಗುಣಮುಖನಾಗಿದ್ದು, ಆತನನ್ನು ಕಸ್ಟಡಿಗೆ ಪಡೆದು ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ. ಸಂತ್ರಸ್ತ ಪುರುಷೋತ್ತಮ ಪೂಜಾರಿ ಗುಣಮುಖರಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ.
ಕುಕ್ಕರ್ ಬಾಂಬ್ ಬಗ್ಗೆ ಈಗ ಡಿಕೆಶಿ ಏನೆನ್ನುತ್ತಾರೆ?: ಸಿಎಂ ಬೊಮ್ಮಾಯಿ ತಿರುಗೇಟು
ಶಂಕಿತ ಉಗ್ರ ಶಾರೀಕ್ ಮೊಹಮ್ಮದ್ ಶಾರೀಕ್‌ನ್ನು ಮಂಗಳವಾರ ಎನ್‌ಐಎ ತಂಡ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆತಂದಿದ್ದು, ಅಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಈತನ ವಿರುದ್ಧ ಕಳೆದ ಸಪ್ಟೆಂಬರ್ 19ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಟ್ರಾಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ಕೇಸು ದಾಖಲಾಗಿತ್ತು. ಅಲ್ಲದೆ ಅಮಿರ್ ಅಹ್ಮದ್ ಸರ್ಕಲ್ ಬಳಿ ಪ್ರೇಮ್ ಸಿಂಗ್ ಇರಿತ ಪ್ರಕರಣದಲ್ಲೂ ಎನ್‌ಐಎ ತನಿಖೆ ಕೈಗೊಂಡಿದೆ.
ಶಿವಮೊಗ್ಗದಲ್ಲಿ ಸ್ಥಳ ಮಹಜರು ಬಳಿಕ ಶಾರೀಕ್‌ನ್ನು ಎನ್‌ಐಎ ತಂಡ ಮಂಗಳೂರಿಗೆ ಕರೆತರಲಿದೆ. ಮಂಗಳೂರಿನ ಕಂಕನಾಡಿಯ ಘಟನಾ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಿದೆ. ಇಡೀ ಘಟನೆಯ ರೀ ಟೇಕ್ ಮಾಡಿಸುವ ಸಾಧ್ಯತೆ ಇದೆ. ಅಲ್ಲದೆ ಶಾರೀಕ್ ಆಟೋದಲ್ಲಿ ಬಂದ ಬಗೆ, ಆತ ಮಂಗಳೂರಿಗೆ ಬಂದಾಗ ಎಲ್ಲೆಲ್ಲಿ ಸಂಚರಿಸಿದ್ದ ಎನ್ನುವ ಮಾಹಿತಿಯನ್ನು ಈಗಾಗಲೇ ಕಲೆಹಾಕಿರುವ ಎನ್‌ಐಎ ತಂಡ ಅಂತಹ ಕಡೆಗಳಲ್ಲೆಲ್ಲ ಸ್ಥಳ ಮಹಜರು ನಡೆಸಲಿದೆ. ಆತ ಆಸ್ಪತ್ರೆಗೆ ದಾಖಲಾಗಿರುವಲ್ಲಿ ವರೆಗಿನ ಶಾರೀಕ್‌ನ ಎಲ್ಲ ಮಂಗಳೂರಿನ ಹೆಜ್ಜೆ ಬಗ್ಗೆ ಎನ್‌ಐಎ ತಂಡ ಮಹಜರು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಶಂಕಿತ ಉಗ್ರ ಶಾರೀಕ್ ಮಂಗಳೂರಿಗೂ ಬರುವುದಕ್ಕೆ ಮುನ್ನ ಮೈಸೂರು, ಕೇರಳ, ತಮಿಳ್ನಾಡು ಪ್ರದೇಶಗಳಲ್ಲಿ ಸಂಚರಿಸಿದ್ದಾನೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದು, ಅಲ್ಲಿಗೂ ಆತನನ್ನು ಕರೆದುಕೊಂಡು ಹೋಗಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಹೇಳಲಾಗಿದೆ.