ಎಂ.ಕೆ.ಹುಬ್ಬಳ್ಳಿ (ಮೇ.22) : ಕಿಡಿಗೇಡಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಿಸಿರುವ ರಾಯಣ್ಣ ಮೂರ್ತಿಯ ಖಡ್ಗ ಹಿಡಿದ ಬಲಗೈ ಕತ್ತರಿಸಲಾಗಿದೆ. ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ ಈ ಕೃತ್ಯವೆಸಗಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
undefined
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರಕ್ಕೆ ಶಾಸಕ ಸಿಟಿ ರವಿ ಆಪ್ತನಿಗೆ ಘೇರಾವ್: ಸ್ಥಳದಿಂದ ಕಾಲ್ಕಿತ್ತು ಬಚಾವ್
ಮೇಲ್ನೊಟಕ್ಕೆ ಇದು ಕಿಡಿಗೇಡಿಗಳ ಕೃತ್ಯ ಎನ್ನಲಾಗುತ್ತಿದೆ. ಆದರೆ, ಘಟನೆ ನಡೆದ ಸ್ಥಳದ ಬಳಿ ಯಾವುದೇ ಸಿಸಿ ಟಿವಿ ಕ್ಯಾಮೆರಾ ಇಲ್ಲದಿರುವುದರಿಂದ ಯಾರು ಈ ಕೃತ್ಯ ವೆಸಗಿದ್ದಾರೆ? ಎಂಬ ಸ್ಪಷ್ಟತೆ ಸಿಗದಾಗಿದೆ. ಹೀಗಾಗಿ ಸಮುದಾಯದ ಜನರು ಈ ಸಂಬಂಧ ಯಾವುದೇ ದೂರು ದಾಖಲಿಸಿಲ್ಲ. ಆದರೆ, ಪಟ್ಟಣದಲ್ಲಿ ಕಿಡಿಗೇಡಿಗಳ ವಿಕೃತಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಂಥ ಘಟನೆ, ಕೃತ್ಯಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ವಯಂ ದೂರು ದಾಖಲಿಸಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ಸದ್ಯ ಪೊಲೀಸ್ ಭದ್ರತೆ ಕಲ್ಪಿಸಿದ್ದು, ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕಿಡಿಗೇಡಿಗಳ ಪತ್ತೆಗೆ ಸೂಚಿಸಲಾಗಿದೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಕಲ್ಯಾಣಶೆಟ್ಟಿ, ಕಿತ್ತೂರು ಪಿಎಸ್‌ಐ ರಾಜು ಮಮದಾಪೂರ, ಎಎಸ್‌ಐ ಗಂಗಾಧರ ಹಂಪನ್ನವರ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಅಲ್ಲದೇ, ಈ ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಪಟ್ಟಣದ ಈ ಪ್ರಮುಖ ವೃತ್ತದಲ್ಲಿ ಸಿಸಿಟಿವಿ ಅಳವಡಿಸಲು ಡಿವೈಎಸ್ಪಿ ಸೂಚಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ, ನೇತಾಜಿ ಪ್ರತಿಮೆ ನಿರ್ಮಾಣ: ಸಿಎಂ ಬೊಮ್ಮಾಯಿ ಆದೇಶ
ಮೂರ್ತಿ ಮರುಸ್ಥಾಪನೆ, ಸಿಸಿ ಟಿವಿ ಅಳವಡಿಕೆಗೆ ಕ್ರಮ
ಎಂ.ಕೆ.ಹುಬ್ಬಳ್ಳಿ ಪಟ್ಟಣ(MK Hubballi city)ದಲ್ಲಿ ಎಲ್ಲ ಸಮುದಾಯದ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ. ಕಿಡಿಗೇಡಿಗಳ ಇಂಥ ಕೃತ್ಯಕ್ಕೆ ಅವಕಾಶವಾಗಂದತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮೂರ್ತಿ ಭಗ್ನಗೊಂಡ ಸ್ಥಳದಲ್ಲಿ ಹೊಸದಾಗಿ ಮೂರ್ತಿ ಮರುಸ್ಥಾಪಿಸಿ, ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಟ್ಟಣದಲ್ಲಿ ಇಂತ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮಲ್ಲಪ್ಪ ನಾಗನೂರ, ಸಿದ್ಧಪ್ಪ ಗೋರಕೊಳ್ಳಿ, ಉಮೇಶ ಜೋತಗನ್ನವರ, ಮಹಾಂತೇಶ ಗಾಣಿಗೇರ, ಪುಟ್ಟಪ್ಪ ಪಟ್ಟಶೆಟ್ಟಿ, ಸರ್ಮೀ ಪಟೇಲ…, ಪ್ರಕಾಶ ಜೋತಗನ್ನವರ, ರಮೇಶ ಸಕ್ರೆನ್ನವರ, ಮಂಜುನಾಥ ಸಕ್ರೆನ್ನವರ, ಶಿವಾನಂದ ನಾಗನೂರ, ಶಂಕರ ಗೋಕಾರ ಸೇರಿದಂತೆ ಹಾಲುಮತ ಸಮುದಾಯದ ಜನರು ಹಾಗೂ ಪಟ್ಟಣದ ನಾಗರಿಕರು ಮನವಿ ಮಾಡಿದ್ದಾರೆ.