* ಕರ್ಪೂರದ ಕಟ್ಟೆ ಗ್ರಾಮದಲ್ಲಿ ನಡೆದ ಘಟನೆ
* ಚಂದ್ರಶೇಖರ್ ಎಂಬುವರು ಸೇರಿದ ಮನೆಯಲ್ಲಿ ಕಳ್ಳತನ
* ಜನರ ಆತಂಕಕ್ಕೆ ಕಾರಣವಾದ ದರೋಡೆ
ಹೊಸದುರ್ಗ(ಮೇ.22): ಐವರು ಮುಸುಕುಧಾರಿಗಳ ಗುಂಪು ಮನೆಗೆ ನುಗ್ಗಿ ಮನೆಯಲ್ಲಿದ್ದವರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಮನೆಯಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು, ಮೊಬೈಲ್ ಫೋನ್ ಕದ್ದು ಪರಾರಿಯಾದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಪೂರದ ಕಟ್ಟೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಕರ್ಪೂರದ ಕಟ್ಟೆ ಗ್ರಾಮದ ಚಂದ್ರಶೇಖರ್ ಎಂಬುವರು ಗ್ರಾಮಕ್ಕೆ ಹೊಂದಿರುವ ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ವಿವರ:
undefined
ಚಂದ್ರಶೇಖರ್, ಪತ್ನಿಯೊಂದಿಗೆ ತಮ್ಮ ಜಮೀನಿನ ಮನೆಯಲ್ಲಿ ವಾಸವಿದ್ದರು. ಇವರಿಗೆ ಒಬ್ಬ ಪುತ್ರನಿದ್ದು ಆತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ತಮ್ಮ ಪುತ್ರಿಯ ಅದೇ ಗ್ರಾಮದಲ್ಲಿ ವಿವಾಹ ಮಾಡಿಕೊಡಲಾಗಿದೆ. ಗುರುವಾರ ಚಂದ್ರಶೇಖರ್ ಹಾಗೂ ಆತನ ಪತ್ನಿ ಇಬ್ಬರೂ ತುಮಕೂರಿನಲ್ಲಿ ತಮ್ಮ ಸಂಬಂಧಿಕರ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ಚಂದ್ರಶೇಖರ್ ಒಬ್ಬರು ಮಾತ್ರ ಊರಿಗೆ ವಾಪಸಾಗಿದ್ದರು. ಮನೆಯಲ್ಲಿ ತಾತ ಒಬ್ಬರೆ ಇರುತ್ತಾರೆ ಎಂದು ಚಂದ್ರಶೇಖರ್‌ರ ಪುತ್ರಿ ವೈಷ್ಣವಿಗೆ ತಾತನ ಜೊತೆಗೆ ಮನೆಯಲ್ಲಿರಲು ಕಳಿಸಿದ್ದಾರೆ. ತಡರಾತ್ರಿ 5 ಜನರ ಗುಂಪು ಮನೆಯ ಹಿಂಬಾಗಿಲಿಂದ ಒಳನುಗ್ಗಿ ಮನೆಯಲ್ಲಿದ್ದ ಚಂದ್ರಶೇಖರ್ ಹಾಗೂ ಆತನ ಮೊಮ್ಮಗಳನ್ನು ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಬೆದರಿಸಿ ಮನೆಯಲ್ಲಿದ್ದ 80 ಸಾವಿರ ರು. ನಗದು, 10ಲಕ್ಷ ರು.ಬೆಲೆ ಬಾಳುವ ಚಿನ್ನಾಭರಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಡಿವೈಎಸ್‌ಪಿ ರೋಷನ್ ಜಮೀರ್, ಇನ್‌ಸ್ಪೆಕ್ಟರ್‌ಗಳಾದ ಫೈಜುಲ್ಲಾ, ಶ್ರೀಧರ್ ಶಾಸ್ತ್ರಿ, ರಾಘವೇಂದ್ರ ಅಲ್ಲದೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
Bengaluru Crime: ಪ್ರಿಯಕರನ ಜತೆ ಸೇರಿ ಹೆತ್ತ ತಾಯಿಯ ಒಡವೆ ಕದ್ದಳು..!
ಹೆಚ್ಚಿದ ಕಳ್ಳತನ ಪ್ರಕರಣ: ಪೊಲೀಸರಿಗೆ ಪತ್ತೆ ಹಚ್ಚುವ ಸವಾಲು
ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 5-6 ತಿಂಗಳಿನಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಏಪ್ರಿಲ್ ಮೊದಲ ವಾರದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಶಿಕ್ಷಕಿಯ ಬೈಕ್ ಸವಾರನೊಬ್ಬ ಹಾಡಹಗಲೇ ಅಡ್ಡಗಟ್ಟಿಮಾಂಗಲ್ಯಸರ ಕಿತ್ತು ಪರಾರಿಯಾಗಿದ್ದನು. ಕಳೆದ ಒಂದು ತಿಂಗಳ ಹಿಂದೆ ಬಲ್ಲಾಳಸಮುದ್ರ ಗ್ರಾಮದ ಸರಹದ್ದಿನಲ್ಲಿ ಬರುವ ವೇದಾವತಿ ನದಿ ಪಾತ್ರದಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳು ಸೇರಿ ಹತ್ತಾರು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಅಳವಡಿಸಿದ್ದ ಲಕ್ಷಾಂತರ ಬೆಲೆ ಬಾಳುವ ತಾಮ್ರದ ವೈಯರ್‌ಗಳ ಕಳ್ಳತನ ಮಾಡಿದ್ದರು. ಈ ಬಗ್ಗೆ ರೈತರು ಹಾಗೂ ಗ್ರಾಪಂ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೂರು ತಿಂಗಳ ಹಿಂದೆ ಶ್ರೀರಾಂಪುರ ಬಸ್ ನಿಲ್ದಾಣದಲ್ಲಿರುವ ಮೂರು ಕಿರಾಣಿ ಅಂಗಡಿಗಳ ಒಂದೇ ರಾತ್ರಿ ಸರಣಿ ಕಳ್ಳತನ ಮಾಡಿದ್ದರು. ಕಿರಾಣಿ ಅಂಗಡಿಗಳಲ್ಲಿ ಕಳವು ಮಾಡಿರುವ ಹಾಗೂ ಶಿಕ್ಷಕಿಯ ಮಾಂಗಲ್ಯ ಸರ ಕಳ್ಳತನ ಪ್ರಕರಣಗಳ ಆರೋಪಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಮತ್ತೆ ಈ ರೀತಿ ಬೆದರಿಸಿ ದರೋಡೆ ಮಾಡಿದ ಘಟನೆ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.