
ಬೆಂಗಳೂರು[ಫೆ.25]: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಬಂಧಿತ ‘ಗ್ಯಾಂಗ್‌ಸ್ಟರ್’ ರವಿ ಪೂಜಾರಿ ಒಂದಲ್ಲ, ಎರಡಲ್ಲ, ನಾಲ್ಕು ಹೆಸರಿಟ್ಟುಕೊಂಡಿದ್ದ.
ಮಂಗಳೂರಿನ ಈತನ ಮೂಲ ಹೆಸರು ರವಿಪ್ರಕಾಶ್ ಪೂಜಾರಿ. ಚೋಟಾ ರಾಜನ್ ಈತನ ಹೆಸರನ್ನು ತನೀಫ್ ಫರ್ನಾಂಡಿಸ್ ಎಂದು ಬದಲಿಸಿದ್ದ. ಬುರ್ಕಿನಾ ಫಾಸೋದಲ್ಲಿ ಈತ ಅಂಥೋನಿ ಫರ್ನಾಂಡಿಸ್ ಆಗಿ ಹಾಗೂ ಸೆನೆಗಲ್‌ನಲ್ಲಿ ರಾಕಿ ಫರ್ನಾಂಡಿಸ್ ಎಂದು ಹೆಸರು ಇಟ್ಟುಕೊಂಡು ನೆಲೆಸಿದ್ದ ಎಂದು ತಿಳಿದುಬಂದಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು, ರವಿ ಪೂಜಾರಿಯನ್ನು ಸೆನೆಗಲ್‌ನಲ್ಲಿ ನೋಡಿದಾಗ ಇವನೇನಾ ಅಂಡರ್ ವಲ್ಡ್‌ರ್ ಡಾನ್ ಎಂದು ಆಶ್ಚರ್ಯ ಆಯಿತು. ನಮ್ಮನ್ನು ಮೊದಲು ನೋಡಿದಾಗ ನೀವು ಭಾರತೀಯರಾ ಎಂದು ಹಿಂದಿಯಲ್ಲಿ ಪ್ರಶ್ನೆ ಮಾಡಿದ್ದ. ಹೌದು, ನಿನ್ನ ಜತೆಯೇ ನಾವು ಭಾರತಕ್ಕೆ ಮರಳುವುದು ಎಂದು ಉತ್ತರಿಸಿದ್ದೆವು ಎಂದು ಹೇಳಿದರು.
ಭಾರತದಲ್ಲಿ ಪೂಜಾರಿ ಸಹಚರರು ಸಕ್ರಿಯ:
ರವಿ ಪೂಜಾರಿ ಭಾರತದಲ್ಲಿರುವ ತನ್ನ ಸಹಚರರ ಮೂಲಕ ವೈದ್ಯರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಜ್ಯೂವೆಲ್ಸ್ ಮಾಲಿಕರು, ನಟರು ಹಾಗೂ ರಾಜಕೀಯ ವ್ಯಕ್ತಿಗಳನ್ನು ಗುರುತಿಸುತ್ತಿದ್ದ. ಬಳಿಕ ಮೊಬೈಲ್ ಸಂಖ್ಯೆ ಪಡೆದು ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡುತ್ತಿದ್ದ.
2005ರಲ್ಲಿ ಆರ್‌ಟಿ ನಗರದಲ್ಲಿ ಉದ್ಯಮಿ ಸುಬ್ಬರಾಜು ಹಣ ಕೊಡದಿದ್ದಕ್ಕೆ ರವಿ ಪೂಜಾರಿ ಸಹಚರರು ಎಂದು ಹೇಳಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಿದ್ದರು. 2007 ಫೆ.15ರಂದು ಹಫ್ತಾ ನೀಡುವಂತೆ ಕರೆ ಮಾಡಿ ಬೆದರಿಸಿದ್ದ ರವಿ ಪೂಜಾರಿ, ಹಫ್ತಾ ಕೊಡಲಿಲ್ಲವೆಂಬ ಕಾರಣಕ್ಕೆ ಸಹಚರರ ಮೂಲಕ ಬೆಂಗಳೂರಿನ ಶಬನಂ ಸೇರಿದಂತೆ ಇಬ್ಬರು ರಿಯಲ್ ಎಸ್ಟೇಟ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. 2009ರಲ್ಲಿ ಇಂದಿರಾನಗರದಲ್ಲಿದ್ದ ಖಾಸಗಿ ವಾಹಿನಿಯೊಂದರ ಕಚೇರಿ ಮೇಲೆ ರವಿ ಪೂಜಾರಿ ಸಹಚರರು ದಾಳಿ ನಡೆಸಿದ್ದರು. ಈ ರೀತಿ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಈ ಎಲ್ಲ ಪ್ರಕರಣಗಳಲ್ಲಿ ಹಂತ-ಹಂತವಾಗಿ ತನಿಖೆ ನಡೆಯಲಿದೆ ಎಂದು ಪಾಂಡೆ ವಿವರಿಸಿದರು.
ಇನ್ನು ಆರೋಪಿಯನ್ನು ವಿದೇಶದಿಂದ ಕೇಂದ್ರ ಸರ್ಕಾರದ ಹಾಗೂ ಪ್ರತಿಯೊಂದು ತನಿಖಾ ಸಂಸ್ಥೆ ನಮಗೆ ಬೆಂಬಲ ನೀಡಿವೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಇದೇ ವೇಳೆ ಅಮರ್ ಕುಮಾರ್ ಪಾಂಡೆ ಹೇಳಿದರು.
ಇಬ್ಬರು ಪುತ್ರಿ, ಒಬ್ಬ ಪುತ್ರ
ರವಿ ಪೂಜಾರಿ ಮುಂಬೈ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾನೆ. ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾನೆ. ರವಿ ಪೂಜಾರಿಯನ್ನು ಹೊರತುಪಡಿಸಿದರೆ ಕುಟುಂಬದ ಸದಸ್ಯರ ಮೇಲೆ ಯಾವುದೇ ದೂರುಗಳಿಲ್ಲ. ಆಫ್ರಿಕಾ ದೇಶದಲ್ಲಿ ಸಭ್ಯನಂತೆ ಈತ ಬದುಕುತ್ತಿದ್ದ. ತನ್ನ ಹೆಸರನ್ನು ಬದಲಿಸಿ ಹೊಸ ಗುರುತು ಪಡೆದು ಬುರ್ಕಿನಾ ಫಾಸೋದ ಸರ್ಕಾರಿ ದಾಖಲೆಗಳನ್ನು ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ