ಮನೋವೈದ್ಯ ನಾಗರಾಜನ ಮತ್ತೊಂದು ಕರಾಳಮುಖ ಬಯಲು, ಉಗ್ರರಿಗಷ್ಟೇ ಅಲ್ಲ, ಹೈಪ್ರೊಫೈಲ್‌ ಕೈದಿಗಳಿಗೂ ಮೊಬೈಲ್‌ ಪೂರೈಕೆ!

Kannadaprabha News   | Kannada Prabha
Published : Jul 12, 2025, 02:53 PM IST
bengaluru crime

ಸಾರಾಂಶ

ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿತರಾದ ಮೂವರ ವಿಚಾರಣೆ ತೀವ್ರಗೊಂಡಿದೆ. ಬಂಧಿತ ಮನೋವೈದ್ಯ ನಾಗರಾಜ್, ಹಣಕ್ಕಾಗಿ ಉಗ್ರರಿಗೆ ಮತ್ತು ಇತರೆ ಆರೋಪಿಗಳಿಗೆ ಮೊಬೈಲ್ ಪೂರೈಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು (ಜು.12) : ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿರುವ ಮೂವರು ಆರೋಪಿಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

ಬಂಧಿತ ಮನೋ ವೈದ್ಯ ನಾಗರಾಜ್‌ ಜೈಲಿನಲ್ಲಿ ಉಗ್ರರು ಮಾತ್ರವಲ್ಲದೆ ಹೈಪ್ರೊಫೈಲ್‌ ಪ್ರಕರಣಗಳ ಆರೋಪಿಗಳಿಗೂ ಮೊಬೈಲ್‌ ಕೊಟ್ಟು ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜೈಲಿನಲ್ಲಿ ಚಿಕಿತ್ಸೆ ನೆಪದಲ್ಲಿ ಆರೋಪಿಗಳನ್ನು ಸಂಪರ್ಕಿಸುತ್ತಿದ್ದ ವೈದ್ಯ ನಾಗರಾಜ್‌ ಹಣ ಪಡೆದು ಕೀ ಪ್ಯಾಡ್‌, ಆ್ಯಂಡ್ರಾಯ್ಡ್ ಮೊಬೈಲ್‌ಗಳನ್ನು ನೀಡುತ್ತಿದ್ದ. ಕೆಲ ಬಾರಿ ಆರೋಪಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಮೊಬೈಲ್‌ ಕೊಡುತ್ತಿದ್ದ. ಮಾತನಾಡಿದ ಸಮಯದ ಆಧಾರದ ಮೇಲೆ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಡಾ। ನಾಗರಾಜ್‌ ಸುಮಾರು 250ಕ್ಕೂ ಅಧಿಕ ಮೊಬೈಲ್‌ಗಳನ್ನು ಜೈಲಿನಲ್ಲಿ ಆರೋಪಿಗಳಿಗೆ ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಉಗ್ರರು, ಶಂಕಿತ ಉಗ್ರರು ಹಾಗೂ ಇತರೆ ಪ್ರಕರಣಗಳ ಆರೋಪಿಗಳಿಗೆ ಮೊಬೈಲ್‌ ಪೂರೈಕೆ ಮಾಡಲು ತನ್ನ ಸಹಾಯಕಿ ಪವಿತ್ರಾಳನ್ನು ಬಳಸಿಕೊಂಡಿರುವುದೂ ತನಿಖೆಯಲ್ಲಿ ಬಯಲಾಗಿದೆ. ಈ ಮೊಬೈಲ್‌ಗಳಲ್ಲಿ ಯಾರೊಂದಿಗೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಎನ್‌ಐಎ ಅಧಿಕಾರಿಗಳು ಬಂಧಿತ ಆರೋಪಿಗಳ ಇಂಟರ್‌ನೆಟ್‌ ಪ್ರೋಟೋಕಾಲ್‌ ಡಿಟೇಲ್ಸ್‌ ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಬಂಧಿತರ ಖಾತೆಗಳಿಗೆ ಹಣ ಜಮೆ

ಬಂಧಿತ ಮೂವರು ಬ್ಯಾಂಕ್‌ ಖಾತೆಗಳಿಗೆ ಲಕ್ಷಾಂತರ ರು. ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಮನೋವೈದ್ಯ ಡಾ। ನಾಗರಾಜ್‌, ಎಎಸ್‌ಐ ಚಾಂದ್ ಪಾಷಾ, ಶಂಕಿತ ಉಗ್ರನ ತಾಯಿ ನಫೀಸಾ ಫಾತಿಮಾ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿರುವ ಎನ್‌ಐಎ ಅಧಿಕಾರಿಗಳು, ಲಕ್ಷಾಂತರ ರು. ವಹಿವಾಟು ನಡೆದಿರುವುದು ಪತ್ತೆ ಹಚ್ಚಿದ್ದಾರೆ.

ಮೂವರು ಆರೋಪಿಗಳು ಆನ್‌ಲೈನ್‌, ನಗದು ಹಾಗೂ ಗಿಫ್ಟ್‌ ರೂಪದಲ್ಲಿ ಲಕ್ಷಾಂತರ ರು. ಹಣ ಸ್ವೀಕರಿಸಿದ್ದಾರೆ. ಉಗ್ರ ಟಿ.ನಾಸೀರ್‌ ಸೂಚನೆ ಮೇರೆಗೆ ಈ ಮೂವರೂ ಹಣ ಪಡೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಣದ ಮೂಲ ಪತ್ತೆಗೆ ತನಿಖೆ:

ಎಎಸ್‌ಐ ಚಾಂದ್‌ ಪಾಷಾ ತನ್ನ ಖಾತೆ ಮಾತ್ರವಲ್ಲದೆ ತನ್ನ ಪುತ್ರನ ಬ್ಯಾಂಕ್‌ ಖಾತೆಗೂ ಹಣ ಹಾಕಿಸಿಕೊಂಡಿದ್ದಾನೆ. ಇನ್ನು ಡಾ.ನಾಗರಾಜ್‌ ಸಹಾಯಕಿ ಪವಿತ್ರಾ ಬ್ಯಾಂಕ್‌ ಖಾತೆಯಲ್ಲಿ ಸುಮಾರು 70 ಲಕ್ಷ ರು. ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಈ ಹಣದ ಮೂಲ ಪತ್ತೆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.

ಬಂಧಿತರ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ ಎಲ್ಲೆಲ್ಲಿಂದ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದೇಶ ಹಾಗೂ ಹೊರದೇಶಗಳಿಂದ ಆರೋಪಿಗಳಿಗೆ ಹಣ ಸಂದಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎನ್‌ಐಎ ಅಧಿಕಾರಿಗಳು ಆ ಹಣದ ಮೂಲ ಪತ್ತೆಗೆ ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ