ದರ್ಶನ್ ನ ರಕ್ಷಣೆಗೆ ಬಿಜೆಪಿ ಶಾಸಕರು, ಸಂಸದರಿಂದ ಒತ್ತಡವಿತ್ತು: ಶಾಸಕ ಪೊನ್ನಣ್ಣ

By Suvarna News  |  First Published Jun 19, 2024, 7:23 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳು ಬಿಜೆಪಿ ಶಾಸಕರು ಸಂಸದರೊಂದಿಗೆ ನೇರ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ವಿರಾಜಪೇಟೆ ಶಾಸಕ ಗಂಭೀರ ಆರೋಪ ಮಾಡಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.19): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳು ಬಿಜೆಪಿ ಶಾಸಕರು ಸಂಸದರೊಂದಿಗೆ ನೇರ ಸಂಬಂಧವಿಟ್ಟುಕೊಂಡಿದ್ದಾರೆ. ಅವರು ಬೇನಾಮಿ ಆಗಿರುವ ಸಾಧ್ಯತೆ ಇದೆ ಎಂದು ವಿರಾಜಪೇಟೆ ಶಾಸಕರೂ ಸಿಎಂ ಕಾನೂನು ಸಲಹೆಗಾರರು ಆಗಿರುವ ಎ.ಎಸ್. ಪೊನ್ನಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.

Latest Videos

undefined

ವಿರಾಜಪೇಟೆಯಲ್ಲಿ ನಡೆಯುತ್ತಿರುವ ಜನ ಸ್ಪಂದನ ಸಭೆ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಜೆಪಿಯವರಿಂದ ಒತ್ತಡ ಬಂದಿವೆ. ಆದರೆ ಎಲ್ಲಿಂದ ಒತ್ತಡ ಬಂದಿದ್ದರೂ ಪೊಲೀಸರು ಮಣಿದಿಲ್ಲ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಅದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದಿರುವ ಪೊನ್ನಣ್ಣ, ಆರೋಪಿಗೆ ಮತ್ತು ಬಿಜೆಪಿ ನಾಯಕರಿಗೆ ಸಂಬಂಧವಿದೆ ಎಂದಿದ್ದಾರೆ.

 14 ನೇ ಆರೋಪಿ ಪ್ರದೋಷ್ ಬಿಜೆಪಿಯ ಶಾಸಕರು, ಸಂಸದರೊಂದಿಗೆ ನೇರ ಸಂಬಂಧ ಹೊಂದಿದ್ದಾನೆ. ಬೇನಾಮಿಯಾಗಿ ಅವರು ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ತನಿಖೆ ಆದರೆ ಯಾರು ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ. ಚುನಾವಣೆಯಲ್ಲಿ ದರ್ಶನ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ, ಚುನಾವಣೆ ಸಂದರ್ಭದಲ್ಲಿ ಈತ ಆರೋಪಿ ಅಂತ ಗೊತ್ತಿರಲಿಲ್ಲ, ಆದರೆ ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ.

ಏಕೆಂದರೆ ಪ್ರಜ್ವಲ್ ರೇವಣ್ಣನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಆತನಿಗೆ ಟಿಕೆಟ್ ಕೊಟ್ಟಿರುವ ಪಕ್ಷ ಅದು. ಪ್ರಜ್ವಲ್ ರೇವಣ್ಣ ಪರವಾಗಿ ಪ್ರಧಾನಿಯವರು ಬಂದು ಪ್ರಚಾರ ಮಾಡಿದ್ದರು. ಈ ನಾಡಿನಲ್ಲಿ ಇಂತಹ ಸುಪುತ್ರ ಹುಟ್ಟಲಿಲ್ಲ ಎಂದೆಲ್ಲಾ ಹೇಳಿದ್ದರು. ಆದ್ದರಿಂದ ಅವರಿಗೆ ಯಾವ ನೈತಿಕತೆ ಇಲ್ಲ. ಆದ್ದರಿಂದ ಇಂತಹ ಯಾವುದೇ ತನಿಖೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಆರೋಪಿಗಳಿಗೆ, ಅಪರಾಧಿಗಳಿಗೆ ರಕ್ಷಣೆ ಕೊಡುವುದು ಬಿಜೆಪಿಯ ಸಂಸ್ಕೃತಿ ಎಂದು ಪೊನ್ನಣ್ಣ ಹೇಳಿದ್ದಾರೆ.

ನಟ ದರ್ಶನ್ ಅರೆಸ್ಟ್ ಪ್ರಕರಣದಲ್ಲಿ ಎಸ್ಪಿಪಿ ಬದಲಾವಣೆ ಮಾಡುತ್ತಿರುವುದು ತಪ್ಪಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ವಿರಾಜಪೇಟೆಯಲ್ಲಿ ಪ್ರತಿಕ್ರಿಯಿಸಿರುವ ಅವರು ಸರ್ಕಾರಿ ಅಭಿಯೋಜಕರೇ ತುಂಬಾ ಜನ ಇದ್ದಾರೆ. ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳೇ ಹತ್ತು ಹನ್ನೆರಡು ಜನ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಕೆಲಸ ಕೊಡಲಾಗುತ್ತದೆ ಅಷ್ಟೇ. ನನಗೆ ತಿಳಿದಿರುವ ಮಟ್ಟಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನೇ ವಿಶೇಷ ಅಭಿಯೋಜಕರಾಗಿ ನೇಮಿಸಲಾಗಿದೆ. ಸರ್ಕಾರದಿಂದ ಸಂಬಳ ಪಡೆದು ಕಾರ್ಯ ನಿರ್ವಹಿಸುತ್ತಿರುವವರನ್ನೇ ನೇಮಿಸಲು ಸರ್ಕಾರ ಚಿಂತನೆ ಮಾಡಿದೆ. 

ಈ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿಲ್ಲ. ಆದ್ದರಿಂದ ವಿಶೇಷ ಅಭಿಯೋಜಕರಿಗೆ ದೊಡ್ಡ ಕೆಲಸ ಇರುವುದಿಲ್ಲ. ಈ ಪ್ರಕರಣ ತೀರಾ ಮಹತ್ವವಿದೆ. ಹೀಗಾಗಿ ಪೊಲೀಸ್ ಇಲಾಖೆಯ ಮಾಹಿತಿ ಆಧಾರದಲ್ಲಿ ಅಭಿಯೋಜಕರ ಬದಲಾವಣೆ ಆಗಿರುತ್ತದೆ. ಈ ಹಂತದಲ್ಲಿ ಬದಲಾವಣೆ ಮಾಡಿರುವುದಕ್ಕೆ ಚಿಂತಿಸಬೇಕಾಗಿಲ್ಲ ಎಂದು ಪೊನ್ನಣ್ಣ ಹೇಳಿದ್ದಾರೆ. 

ಜಾಮೀನು ಅರ್ಜಿ ಹಾಕುವಂತಹ ಸಂದರ್ಭಗಳಲ್ಲೆಲ್ಲಾ ಆಗಿದ್ದರೆ ಯೋಚಿಸಬೇಕಿತ್ತು. ಈಗ ಅಂತಹದ್ದೇನೂ ಆಗಿಲ್ಲ ಅಲ್ಲವೇ.? ಅಭಿಯೋಜಕರ ಬದಲಾವಣೆ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದ್ದು, ಅದನ್ನು ಗೃಹ ಇಲಾಖೆ ಮಾಡಿರುತ್ತದೆ. ಇದರಲ್ಲಿ ಯಾವುದೇ ತಪ್ಪು ಸಂದೇಶದ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎ.ಎಸ್ ಪೊನ್ನಣ್ಣ, ಎಸ್ಪಿಪಿ ಬದಲಾವಣೆ ವಿಷಯವನ್ನು ಸಮರ್ಥಿಸಿಕೊಂಡಿದ್ದಾರೆ.

click me!