5 ಲಕ್ಷ ಕೇಳಿದ್ದವನಿಗೆ ಗುಂಡೇಟು| ಜೆಲ್ಲಿ ಕಲ್ಲು ಗಣಿಗಾರಿಕೆ ಉದ್ಯಮಿ ಪುತ್ರನ ಕಿಡ್ನಾಪ್| ಬೇಗೂರು - ಕೊಪ್ಪ ರಸ್ತೆಯಲ್ಲಿ ಆರೋಪಿಗೆ ಶೂಟ್| ಮೊಬೈಲ್ ಟವರ್ ಲೋಕೇಷನ್ ಮೂಲಕ ಆರೋಪಿ ಇರುವಿಕೆಗೆ ಪತ್ತೆ ಹಚ್ಚಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು|
ಬೆಂಗಳೂರು(ಸೆ.25): ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿ ಐದು ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ನಡೆದಿದೆ. ಕೋಣನಕುಂಟೆ ನಿವಾಸಿ ಕೃಷ್ಣ ಅಲಿಯಾಸ್ ಆಟೋ ಕೃಷ್ಣ ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಹುಳಿಮಾವು ಸಮೀಪದ ಬೇಗೂರು-ಕೊಪ್ಪ ರಸ್ತೆಯಲ್ಲಿ ಬುಧವಾರ ರಾತ್ರಿ ಈ ದಾಳಿ ನಡೆದಿದೆ.
ಉದ್ಯಮಿ ಜೋಸೆಫ್ ಪುತ್ರ ಜೋಕಿಮ್‌ನನ್ನು ರಕ್ಷಿಸಲಾಗಿದೆ. ಬೇಗೂರು ಸುತ್ತಮುತ್ತ ಜೆಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಸಂತ್ರಸ್ತ ಜೊಕಿಮ್ ತಂದೆ ಜೋಸೆಫ್ ತೊಡಗಿದ್ದಾರೆ. ಈ ವಿಚಾರ ತಿಳಿದಿದ್ದ ಕೃಷ್ಣ, ಸುಲಭವಾಗಿ ಹಣ ಸಂಪಾದಿಸಲು ತನ್ನ ಸಹಚರರ ಜತೆ ಸೇರಿ ಅಪಹರಣಕ್ಕೆ ಸಂಚು ರೂಪಿಸಿದ್ದ. ಮೈಲಸಂದ್ರದಲ್ಲಿ ಬಳಿ ಮಂಗಳವಾರ ಸಂಜೆ 4ರ ಸುಮಾರಿಗೆ ಜೊಕಿಮ್‌ನನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಒತ್ತೆಯಾಗಿಟ್ಟಿದ್ದರು.
ಪೊಲೀಸರ ಮೇಲೆಯೇ ತಿರುಗಿಬಿದ್ದ ಆರೋಪಿಗೆ ಗುಂಡೇಟು
ಕೆಲ ಹೊತ್ತಿನ ಬಳಿಕ ಸಂತ್ರಸ್ತನಿಂದ ಆತನ ತಂದೆಗೆ ವಾಟ್ಸ್ ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿಸಿದ್ದ ಕೃಷ್ಣ ತಂಡವು, 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 2 ಲಕ್ಷಕ್ಕೆ ಆರೋಪಿಗಳು ಪಟ್ಟು ಹಿಡಿದಿದ್ದರು. ಪುತ್ರನ ಅಪಹರಣದಿಂದ ಆತಂಕಗೊಂಡ ಜೊಕಿಮ್ ತಾಯಿ ಮೇರಿ ಜೋಸೆಫ್, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಶುರು ಮಾಡಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ಮೊಬೈಲ್ ಟವರ್ ಲೋಕೇಷನ್ ಮೂಲಕ ಕೃಷ್ಣ ಇರುವಿಕೆಗೆ ಪತ್ತೆ ಹಚ್ಚಿದ್ದರು. ಆಗ ಬೇಗೂರು ರಸ್ತೆಯಲ್ಲಿ ದಾಳಿ ನಡೆಸಿ ಅಪಹೃತನನ್ನು ರಕ್ಷಿಸಿದ ಪಿಎಸ್‌ಐ ಅಯ್ಯಪ್ಪ ತಂಡವು, ಆರೋಪಿ ಕೃಷ್ಣನನ್ನು ಬಂಧಿಸಲು ಮುಂದಾಗಿದೆ. ಈ ವೇಳೆ ತನಿಖಾ ತಂಡದ ಮೇಲೆ ಡ್ರ್ಯಾಗರ್‌ನಿಂದ ಆತ ಹಲ್ಲೆಗಿಳಿದಿದ್ದಾನೆ. ಈ ಹಂತದಲ್ಲಿ ಪೊಲೀಸರಿಗೆ ಪೆಟ್ಟಾಗಿದೆ. ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್, ಕೃಷ್ಣನ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ತಲೆಮರೆಸಿಕೊಂಡಿರುವ ಆತನ ಸಹಚರರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.