
ಬೆಂಗಳೂರು(ಫೆ.04): ವಿಧವೆಯನ್ನು ಪ್ರೀತಿಸಿ ಇತ್ತೀಚೆಗೆ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತನಗರ ಪೊಲೀಸ್ ಕ್ವಾಟ್ರಸ್ಟ್ ನಿವಾಸಿ ರೇಖಾ ಅವರು ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಮನೋಜ್(31) ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಅಮ್ಮ ಕ್ಷಮಿಸಿ ಎಂದು ಬರೆದು ವಿದ್ಯಾರ್ಥಿನಿ ನೇಣಿಗೆ ಶರಣು
ರೇಖಾ ನೀಡಿದ ದೂರಿನ ಅನ್ವಯ, ನನ್ನ ಮೊದಲ ಪತಿ ನಿಂಗರಾಜು ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ನೋಟಿಸ್ ನೀಡಲು ಮನೆಗೆ ಬಂದಿದ್ದ ಕಾನ್ಸ್‌ಟೇಬಲ್ ಮನೋಜ್ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ನಾನು ವಿಧವೆಯಾಗಿದ್ದು, 2 ಹಣ್ಣು ಮಕ್ಕಳಿರುವ ವಿಚಾರ ಮನೋಜ್‌ಗೆ ಗೊತ್ತಿತ್ತು. ಪರಸ್ಪರ ಒಪ್ಪಿಗೆ ಮೇರೆಗೆ 2024ರ ಆ.7ರಂದು ನಂಜನಗೂಡಿನಲ್ಲಿ ಮದುವೆಯಾಗಿದ್ದೆವು. ನ.28ರಂದು ವೈಯಾಲಿಕಾವಲ್ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಗಿತ್ತು.
ಕೆಲ ದಿನದ ಬಳಿಕ ಕಿರುಕುಳ:
ಇದಾದ ಎರಡು ದಿನಗಳ ಬಳಿಕ ಮನೋಜ್ ಅವರ ಅಕ್ಕ ಪವಿತ್ರ, ಬಾವ ವಸಂತ್, ತಂಗಿ ಮೇಘನಾ ಮತ್ತು ಸ್ನೇಹಿತ ವಿನಯ್ ಕುಮಾರ್ ನಮ್ಮ ಮನೆಗೆ ಬಂದು ಬೈದು ಹೋಗಿದ್ದರು. ಇದಾದ ಬಳಿಕ ಪತಿ ಮನೋಜ್ ಸಣ್ಣ ವಿಚಾರಗಳಿಗೆ ಗಲಾಟೆ ಮಾಡುತ್ತಿದ್ದರು. ನೀನು ನಮ್ಮ ಮನೆಯವರಿಗೆ ಇಷ್ಟವಿಲ್ಲ. ನೀನು ವಿಧವೆ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಾನು ಬೇರೆಯವರನ್ನು ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು ಬೈದು ಹಲ್ಲೆ ಮಾಡಿದ್ದರು. ಮುಂದೆ ಸರಿ ಹೋಗಬಹುದು ಎಂದು ಸಹಿಸಿಕೊಂಡು ಸುಮ್ಮನಿದ್ದೆ. ಬಳಿಕ ಪತಿ ವರದಕ್ಷಿಣೆ ತರುವಂತೆ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು. ವರಕ್ಷಿಣೆ ತೆಗೆದುಕೊಂಡು ಬಾ ಇಲ್ಲವೇ ವಿಚ್ಛೇದನ ಕೊಡು ಎಂದು ಹಿಂಸೆ ನೀಡಿದ್ದಾರೆ.
ಪತಿಯ ಕಿಡ್ನಿ ಮಾರಿ, ಲವರ್ ಜೊತೆ ಪರಾರಿಯಾದ ಕಿರಾತಕಿ! ಮಗಳ ಹೆಸರಲ್ಲಿ ಗಂಡನ ಬಲಿ...
ಪತಿಗೆ ಅನೈತಿಕ ಸಂಬಂಧವಿದೆ:
ಈ ವೇಳೆ ಅನುಮಾನಗೊಂಡು ಮನೋಜ್ ಅವರ ಫೋನ್ ಪರಿಶೀಲಿಸಿದಾಗ ಅದರಲ್ಲಿ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿರುವ ವಿಡಿಯೋಗಳು ಹಾಗೂ ಫೋಟೋಗಳು ಸಿಕ್ಕಿವೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಪತಿ ಮನೋಜ್ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಅಕ್ಕ, ಬಾವ, ತಂಗಿ, ಸ್ನೇಹಿತರು ಬೈದು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪತಿ ಮನೋಜ್ ಹಾಗೂ ಅವರ ಕುಟುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರೇಖಾ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕಾನ್ಸ್‌ಟೇಬಲ್ ನಾಪತ್ತೆ
ಪ್ರಕರಣ ದಾಖಲಾದ ಬೆನ್ನಲ್ಲೇ ಕಾನ್ಸ್‌ಟೇಬಲ್ ಮನೋಜ್ ನಾಪತ್ತೆಯಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಕಾನ್ಸ್‌ಟೇಬಲ್‌ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಿಗೆ ಶೀಘ್ರದಲ್ಲೇ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ