ಟ್ರ್ಯಾಕ್ಟರ್ ಕದ್ದು ಭೋಗ್ಯಕ್ಕೆ ಬಿಡುತ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್‌

Kannadaprabha News   | Asianet News
Published : Nov 13, 2020, 03:32 PM IST
ಟ್ರ್ಯಾಕ್ಟರ್ ಕದ್ದು ಭೋಗ್ಯಕ್ಕೆ ಬಿಡುತ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್‌

ಸಾರಾಂಶ

ಆರೋಪಿಯಿಂದ 55 ಲಕ್ಷ ಮೌಲ್ಯದ 12 ಟ್ರ್ಯಾಕ್ಟರ್‌ ವಶ| ಮಂಡ್ಯ ಜಿಲ್ಲೆ ಜಿ.ಕೆಬ್ಬೆಳ್ಳಿ ನಿವಾಸಿ ಬೋರೇಗೌಡ ಬಂಧಿತ ಆರೋಪಿ| 50 ಕಿ.ಮೀವರೆಗೆ ಸಿಸಿಟಿವಿ ಪರಿಶೀಲನೆ| ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ಆರೋಪಿಗಳ ಓಡಾಟ ದೃಶ್ಯ ಪತ್ತೆ| 

ಬೆಂಗಳೂರು(ನ.13): ರಸ್ತೆ ಬದಿ ಹಾಗೂ ರೈತರ ಜಮೀನುಗಳಲ್ಲಿ ನಿಲ್ಲಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ಕಳವು ಮಾಡಿ ಮಾರಾಟ ಮಾಡುವುದರ ಜತೆ ಭೋಗ್ಯಕ್ಕೆ ನೀಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಂಡ್ಯ ಜಿಲ್ಲೆ ಜಿ.ಕೆಬ್ಬೆಳ್ಳಿ ನಿವಾಸಿ ಬೋರೇಗೌಡ (48) ಬಂಧಿತನಾಗಿದ್ದು, ಆರೋಪಿಯಿಂದ 55 ಲಕ್ಷ ಮೌಲ್ಯದ 12 ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಆನಂದ್‌ ಪತ್ತೆಗೆ ತನಿಖೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಪಶ್ಚಿಮ) ಸೌಮೆಂದು ಮುಖರ್ಜಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸುಂಕದಕಟ್ಟೆಯ ಹೊಯ್ಸಳ ನಗರದ ಉದ್ಯಾನದ ಬಳಿ ಟ್ರ್ಯಾಕ್ಟರ್‌ ನಿಲ್ಲಿಸಿ ತನ್ನೂರು ಹುಲಿಯೂರು ದುರ್ಗಕ್ಕೆ ಚಾಲಕ ಲೋಕೇಶ್‌ ಹೋಗಿದ್ದ. ಆಗ ಟ್ರ್ಯಾಕ್ಟರ್‌ ಅನ್ನು ಕಳವು ಮಾಡಿದ ಆರೋಪಿಗಳು, ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದರು. ಕೃತ್ಯದ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ತವ್ಯ ನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

ಟ್ರ್ಯಾಕ್ಟರ್‌ ಕಳ್ಳರ ವೃತ್ತಾಂತ

ಎರಡ್ಮೂರು ವರ್ಷಗಳಿಂದ ಬೋರೇಗೌಡ ತನ್ನ ಗೆಳೆಯ ಆನಂದ್‌ ಜತೆ ಸೇರಿ ಬೆಂಗಳೂರು ನಗರ ಹೊರವಲಯದಲ್ಲಿ ಕಾರಿನಲ್ಲಿ ಸುತ್ತಾಡುತ್ತಿದ್ದರು. ಆ ವೇಳೆ ಕಣ್ಣಿಗೆ ಬೀಳುವ ಟ್ರ್ಯಾಕ್ಟರ್‌ಗಳನ್ನು ಕಳವು ಮಾಡುತ್ತಿದ್ದರು. ಕದ್ದ ಟ್ರ್ಯಾಕ್ಟರ್‌ಗಳನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಕೆಲವು ಬಾರಿ ಭೋಗ್ಯಕ್ಕೆ ಸಹ ಕೊಡುತ್ತಿದ್ದರು. ಅನಾರೋಗ್ಯ, ಚಾಲಕನಿಗೆ ವೇತನ ಕೊಡಲು ಸಾಧ್ಯವಿಲ್ಲ ಹೀಗೆ ಏನಾದರೂ ಕಾರಣ ನೀಡಿ ತಿಂಗಳಿಗೆ 5 ರಿಂದ 15 ಸಾವಿರಕ್ಕೆ ಬಾಡಿಗೆಗೆ ಕೊಡುತ್ತಿದ್ದರು. ಪ್ರತಿ ತಿಂಗಳು ಆರೋಪಿಗಳು ಬಾಡಿಗೆ ವಸೂಲಿ ಮಾಡುತ್ತಿದ್ದರು. ಕೆಲವುಗಳನ್ನು 2 ರಿಂದ 3 ಲಕ್ಷಕ್ಕೆ ಮಾರಾಟವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಅ.18ರಂದು ಸುಂಕದಕಟ್ಟೆಯ ಹೊಯ್ಸಳ ನಗರ ಉದ್ಯಾನ ಬಳಿ ನಿಂತಿದ್ದ ಟ್ರ್ಯಾಕ್ಟರ್‌ ಕಳವಾಗಿತ್ತು.

50 ಕಿ.ಮೀವರೆಗೆ ಸಿಸಿಟಿವಿ ಪರಿಶೀಲಿಸಿದ ಪೊಲೀಸರು

ಅಂದು ಟ್ರ್ಯಾಕ್ಟರ್‌ ಕಳವು ಮಾಡಿದ ಆರೋಪಿಗಳು, ನೆಲಮಂಗಲ, ಕುಣಿಗಲ್‌ ಮಾರ್ಗವಾಗಿ ಮಂಡ್ಯಕ್ಕೆ ತಲುಪಿದ್ದರು. ಈ ಕಳ್ಳತನ ತನಿಖೆ ಕೈಗೊಂಡ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ಆರೋಪಿಗಳ ಓಡಾಟ ದೃಶ್ಯ ಪತ್ತೆಯಾಯಿತು.

ಸುಂಕದಕಟ್ಟೆಯಿಂದ ಆರಂಭವಾಗಿ ಕುಣಿಗಲ್‌ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ರಸ್ತೆವರೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ನಡೆಸಿದಾಗ ಟ್ರ್ಯಾಕ್ಟರ್‌ ಸಂಚಾರದ ಸುಳಿವು ಸಿಕ್ಕಿತು. ಅಲ್ಲಿಂದ ಮಂಡ್ಯಕ್ಕೆ ಟ್ರ್ಯಾಕ್ಟರ್‌ ಅನ್ನು ಬೋರೇಗೌಡ ಚಲಾಯಿಸಿದ್ದ. ಅದೇ ದಾರಿ ಸಾಗುತ್ತ ರೈತರನ್ನು ವಿಚಾರಿಸಲಾಯಿತು. ಕೊನೆಗೆ ಒಬ್ಬ ರೈತ, ತನ್ನ ಹೊಸ ಟ್ರ್ಯಾಕ್ಟರ್‌ಗೆ ಕಳ್ಳತನವಾಗಿದ್ದ ಟ್ರ್ಯಾಕ್ಟರ್‌ನ ಟಿಲ್ಲರ್‌ ಜೋಡಿಸಿದ್ದ. ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಬೋರೇಗೌಡನ ಸುಳಿವು ಸಿಕ್ಕಿತು. ಆ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ