ಬ್ಯಾಡಗಿ: ಆಸ್ತಿ ವಿವಾದ ವ್ಯಕ್ತಿಯ ಸಾವಿನಲ್ಲಿ ಅಂತ್ಯ

By Kannadaprabha NewsFirst Published May 14, 2021, 3:38 PM IST
Highlights

*ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಘಟನೆ
* ಠಾಣೆಯೆದುರು ಕುಸಿದು ಬಿದ್ದ ಜಗದೀಶ್‌
* ಆರೋಪಿಗಳು ಪರಾರಿ
 

ಬ್ಯಾಡಗಿ(ಮೇ.14): ಆಸ್ತಿ ವಿವಾದವೊಂದು ವ್ಯಕ್ತಿಯೊಬ್ಬನ ಸಾವಿನಲ್ಲಿ ಕೊನೆಗೊಂಡ ಘಟನೆ ಪಟ್ಟಣದ ಕಾಕೋಳ ರಸ್ತೆಯಲ್ಲಿ ಗುರುವಾರ ನಡೆದಿದೆ. ಸಾವಿಗೀಡಾದ ವ್ಯಕ್ತಿಯನ್ನು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಜಗದೀಶ ಬಾರ್ಕಿ ಎಂದು ಗುರ್ತಿಸಲಾಗಿದೆ.

ಘಟನೆ ಹಿನ್ನೆಲೆ:

ಪಿತ್ರಾರ್ಜಿತ ಆಸ್ತಿ ಕುರಿತಂತೆ ಸೋದರ ಸಂಬಂಧಿಗಳ ಮಧ್ಯೆ ಪಟ್ಟಣದ ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಆದರೆ ಇನ್ನೂ ಇತ್ಯರ್ಥವಾಗದ ಕಾರಣ ಕಳೆದ ಹಲವು ದಿನಗಳಿಂದ ವಾದ- ವಿವಾದಗಳು ನಡೆಯುತ್ತಾ ಬಂದಿದ್ದವು ಎನ್ನಲಾಗುತ್ತಿದೆ.

ಸೋಂಕಿತೆಯೆಂದು ಅಮ್ಮನನ್ನೇ ಮನೆಗೆ ಸೇರಿಸಿಕೊಳ್ಳದ ಪಾಪಿ ಮಗ: ಅತ್ಮಹತ್ಯೆಗೆ ಶರಣಾದ ತಾಯಿ

ಘಟನೆಯಲ್ಲಿ ಆರೋಪಿಗಳಾದ ಮಹಾಂತೇಶ ಬಾರ್ಕಿ, ಕಿರಣ ಬಾರ್ಕಿ ಹಾಗೂ ಪಟ್ಟಣದ ಪುರಸಭೆ ಎಂಟನೇ ವಾರ್ಡ್‌ ಸದಸ್ಯ ಮಂಜುನಾಥ ಬಾರ್ಕಿ ಮೂವರು ಆಸ್ತಿ ವಿವಾದದ ಕುರಿತು ಜಗದೀಶ್‌ ಬಾರ್ಕಿ ಮನೆಗೆ ಬಂದು ಬುಧವಾರ ರಾತ್ರಿಯಿಡೀ ಜಗಳವಾಡಿದ್ದಾರೆ. ಜಗಳ ಅತಿರೇಕಕ್ಕೆ ಹೋದ ಸಂದರ್ಭದಲ್ಲಿ ಮೃತ ಜಗದೀಶ ಬಾರ್ಕಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಲು ಠಾಣೆ ಬಳಿ ಆಗಮಿಸಿದ್ದಾನೆ.

ಠಾಣೆಯೆದುರು ಕುಸಿದು ಬಿದ್ದ ಜಗದೀಶ್‌:

ದೂರು ಸಲ್ಲಿಸಲು ಪೊಲೀಸ್‌ ಠಾಣೆಗೆ ಬಂದಿದ್ದ ಜಗದೀಶ್‌ ಬಾರ್ಕಿ, ಸಾಯುವುದಕ್ಕೂ ಮುನ್ನ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮೊಬೈಲ್‌ನಲ್ಲಿ ಯಾರದೋ ಬಳಿ ಮಾತನಾಡುತ್ತಿದ್ದ. ಆನಂತರ ನನ್ನ ತಲೆಭಾರವಾಗುತ್ತಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪೊಲೀಸರಲ್ಲಿ ಮನವಿ ಮಾಡಿದ್ದಾನೆ. ಈ ಸಂದರ್ಭದದಲ್ಲಿ ಕಾರ‍್ಯಪ್ರವೃತ್ತರಾದ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾಗಿ ತಿಳಿದು ಬಂದಿದೆ.

ಆರೋಪಿಗಳು ಪರಾರಿ:

ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಮಹಾಂತೇಶ್‌ ಕಿರಣ ಹಾಗೂ ಮಂಜುನಾಥ ಮೂವರ ವಿರುದ್ಧ ಕೊಲೆ ಆನಂದ ಬಾರ್ಕಿ ಎಂಬವರು ಕೊಲೆ ಕೇಸ್‌ ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ಕಣ್ಮರೆಯಾಗಿದ್ದು, ಕೊಲೆ ಕೇಸ್‌ಗೆ ಇಂಬು ನೀಡುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
 

click me!