ಸರ್ಕಾರಿ ಆಸ್ಪತ್ರೆ ವೈದ್ಯ‌ರ ಎಡವಟ್ಟಿನಿಂದ ತಾಯಿ-ಮಗು ಸಾವು, ಆಸ್ಪತ್ರೆಯ ಶೌಚಾಲಯದಲ್ಲಿ ಶಿಶು ಶವ ಪತ್ತೆ

By Suvarna NewsFirst Published Feb 24, 2022, 7:25 PM IST
Highlights

* ಆಸ್ಪತ್ರೆಯ ಶೌಚಾಲಯದಲ್ಲಿ ಶಿಶು ಶವ ಪತ್ತೆ, ತಾಯಿ-ಮಗು 
* ಸರ್ಕಾರಿ ಆಸ್ಪತ್ರೆ ವೈದ್ಯ‌ರ ಎಡವಟ್ಟಿನಿಂದ ತಾಯಿ-ಮಗು ಸಾವು
* ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು
* ತುಮಕೂರು ಜಿಲ್ಲೆಯಲ್ಲಿ ನಡೆದ ಈ ಮೂರು ಘಟನೆಗಳು

ತುಮಕೂರು, (ಫೆ.24): ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಿ-ಮಗು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ  ಎರಡು ಬೈಕ್​ ಹಾಗೂ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನು ಕೊರಟಗೆರೆ ಆಸ್ಪತ್ರೆಯ ಬಾತ್ ರೂಮ್​ನಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಈ ಮೂರು ಘಟನೆಗಳು ತುಮಕೂರು ಜಿಲ್ಲೆಯಲ್ಲೇ ನಡೆದಿದ್ದು, ಇದರ ವಿವರಣೆ ಈ ಕೆಳಗಿನಂತಿದೆ ನೋಡಿ

ಬಾತ್ ರೂಮ್​ನಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ
 ಆಸ್ಪತ್ರೆಯ ಶೌಚಾಲಯದಲ್ಲಿ (Toilet) ನವಜಾತ ಹೆಣ್ಣು ಮಗುವನ್ನು ಬಿಸಾಡಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ(Hospital) ನಡೆದಿದೆ. ಆಸ್ಪತ್ರೆಯ ಶೌಚಾಲಯವನ್ನು  ಸ್ವಚ್ಛಗೊಳಿಸಲು ಸಿಬ್ಬಂದಿ ಹೋದಾಗ ನವಜಾತ ಶಿಶು(Baby) ಪತ್ತೆಯಾಗಿದೆ. ಸದ್ಯ  ತಿಂಗಳ  ಹೆಣ್ಣು ನವಜಾತ ಶಿಶು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 

ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು
 ಎರಡು ಬೈಕ್​ ಹಾಗೂ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆಯಲ್ಲಿ ನಡೆದಿದೆ.

ಮೃತರನ್ನು ಅರಸೀಕೆರೆಯ ಆಕಾಶ್ ಹಾಗೂ ತುರುವೇಕೆರೆಯ ಇಬ್ಬರು ಎಂದು ಗುರುತಿಸಲಾಗಿದೆ. ಮೊದಲು ಲಾರಿಯೊಂದು ಬೈಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಈ ಅಪಘಾತ ನೋಡಲು ತೆರಳುತ್ತಿದ್ದ ಬೈಕ್ ಅದೇ ಲಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಆ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಯಿ-ನವಜಾತ ಶಿಶು ಸಾವು
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದಾಗಿ ತಾಯಿ-ಮಗು ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧುಗಿರಿ ತಾಲೂಕಿನ‌ ಬ್ರಹ್ಮದೇವರಹಳ್ಳಿ ಗ್ರಾಮದ ನಿವಾಸಿ ಕಮಲಮ್ಮ ಮತ್ತು ನವಜಾತ ಶಿಶು ಮೃತಪಟ್ಟಿದೆ. ಕಮಲಮ್ಮನಿಗೆ ಹೆರಿಗೆನೋವು ಕಾಣಿಸಿಕೊಂಡಿದ್ದರಿಂದ ಹೊಸಕೆರೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇಲ್ಲದ ಕಾರಣ ಕುಟುಂಬಸ್ಥರು ಪರದಾಡಿದ್ದಾರೆ. ಬಳಿಕ ನರ್ಸ್​ಗಳೇ ಚಿಕಿತ್ಸೆ ಕೊಟ್ಟಿದ್ದಾರೆ. ನರ್ಸ್​ಗಳ ಚಿಕಿತ್ಸೆ ಬಳಿಕ ನವಜಾತ ಶಿಶು ಮೃತಪಟ್ಟಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ.

ಈ ವೇಳೆ ತಾಯಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್  ಇಲ್ಲದೇ ಕಮಲಮ್ಮ ಕುಟುಂಬಸ್ಥರು ಒದ್ದಾಡಿದ್ದಾರೆ. ಕೊನೆಗೆ ಕಾರಿನಲ್ಲಿ ಬೇರೆ ಆಸ್ಪತ್ರೆಗೆ ಕರಿದೊಯ್ಯುವ ಮಾರ್ಗ ಮಧ್ಯೆ ಕಮಲಮ್ಮ ಮೃತಪಟ್ಟಿದ್ದಾರೆ. ಹೊಸಕೆರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಆರೋಪ ಕೇಳಿಬಂದಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಹಾಗೂ ತಾಯಿ ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಡಾಕ್ಟರೇ ಇರಲಿಲ್ಲ. ನರ್ಸ್‌ಗಲೇ ನಾರ್ಮಲ್ ಡಿಲೇವರಿ ಮಾಡ್ತೀನಿ ಅಂದ್ರು. ಆ ಮೇಲೆ ಮಗುನ ಹೊರಕ್ಕೆ ತೆಗೆದ್ರು. ಮಗು ಅಳ್ತಾ ಇರಲಿಲ್ಲ. ತಲೆಯಲ್ಲಿ ನೀರು ತುಂಬ್ಕೊಂಡಿದೆ ದೊಡ್ಡ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಂದ್ರು. ಆಂಬ್ಯುಲೆನ್ಸ್‌ಗೆ  ಫೋನ್ ಮಾಡಿದ್ರೆ ಸರಿಯಾದ ಪ್ರತಿಕ್ರಿಯೆ ಇಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಪ್ರಾಣ ಬಿಟ್ಟಿದ್ದಾರೆ ಎಂದು ಮೃತ ಮಹಿಳೆಯ ಗಂಡ ಕಣೀರು ಹಾಕಿದ್ದಾರೆ.

ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ
ಮೈಸೂರು
: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ರಮೇಶ್ ಕುಮಾರ್ (56) ಕೊಲೆಯಾದ ವ್ಯಕ್ತಿ. ಅರ್ಜುನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಪಂಪ್​ಸೆಟ್ ಶೆಡ್‌ನಲ್ಲಿ ರಮೇಶ್ ಕುಮಾರ್​ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಸಂಬಂಧ ಕೆ.ಆರ್.ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!