ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್

Published : Dec 17, 2025, 05:28 PM IST
Canara Bank Gold Scam

ಸಾರಾಂಶ

ಮೈಸೂರಿನ ಹಿನಕಲ್ ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ಸ್ವರೂಪ ಬದಲಾದ ಆರೋಪ. ಆಭರಣದ ವಿನ್ಯಾಸ, ತೂಕ ಸರಿಯಾಗಿದ್ದರೂ 85 ಗುಂಡುಗಳ ಸರದಲ್ಲಿ 77 ಮಾತ್ರ ಲಭ್ಯ! ತನಿಖೆಗೆ ಆದೇಶ.

ಮೈಸೂರು (ಡಿ.17): ಸಾಮಾನ್ಯವಾಗಿ ಹಣ ಉಳಿತಾಯ ಮಾಡುವ ಹಾಗೂ ಚಿನ್ನಾಭರಣವನ್ನು ಭದ್ರತೆಯಾಗಿ ಇಡುವುದಕ್ಕೆ ಬ್ಯಾಂಕ್ ಒಂದು ನಂಬಿಕೆಯ ಕೇಂದ್ರವಾಗಿದೆ. ಆದರೆ ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಚಿನ್ನ ಅಡಮಾನ ಇಟ್ಟಿದ್ದ ಗ್ರಾಹಕರಿಗೆ ಬ್ಯಾಂಕ್‌ನಿಂದಲೇ ಮೋಸವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು ಹೋಗಿ ಮನೆಯಲ್ಲಿ ಪರಿಶೀಲಿಸಿದಾಗ, ಚಿನ್ನದ ಆಭರಣಗಳ ಸ್ವರೂಪವೇ ಬದಲಾಗಿರುವುದು ಬೆಳಕಿಗೆ ಬಂದಿದ್ದು, ನೂರಾರು ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ

ಹಿನಕಲ್ ಕೆನರಾ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದ ಚಿನ್ನವನ್ನು ಕೆಲವು ಗ್ರಾಹಕರು ಇತ್ತೀಚೆಗೆ ಹಣ ಪಾವತಿಸಿ ಬಿಡಿಸಿಕೊಂಡಿದ್ದರು. ಹೊರನೋಟಕ್ಕೆ ಚಿನ್ನದ ತೂಕ ಸರಿಯಾಗಿ ಕಂಡರೂ, ಆಭರಣದ ವಿನ್ಯಾಸದಲ್ಲಿ ಬದಲಾವಣೆ ಇರುವುದು ಗ್ರಾಹಕರ ಗಮನಕ್ಕೆ ಬಂದಿದೆ. ಉದಾಹರಣೆಗೆ, ಗ್ರಾಹಕರೊಬ್ಬರು 85 ಗುಂಡುಗಳಿದ್ದ ಚಿನ್ನದ ಸರವನ್ನು ಅಡಮಾನ ಇಟ್ಟಿದ್ದರು. ಆದರೆ ಅದನ್ನು ವಾಪಸ್ ಪಡೆದಾಗ ಅದರಲ್ಲಿ ಕೇವಲ 77 ಗುಂಡುಗಳಿದ್ದವು! ಸರವನ್ನು ಧರಿಸಲು ಪ್ರಯತ್ನಿಸಿದಾಗ ಅದರ ಉದ್ದ ಕಡಿಮೆಯಾಗಿರುವುದು ಕಂಡುಬಂದಿದೆ. ಈ ರೀತಿ ಹಲವು ಗ್ರಾಹಕರ ಆಭರಣಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

ಬ್ಯಾಂಕ್ ಎದುರು ಉದ್ವಿಗ್ನ ಸ್ಥಿತಿ

ಈ ವಿಷಯ ತಿಳಿಯುತ್ತಿದ್ದಂತೆ ನೂರಕ್ಕೂ ಹೆಚ್ಚು ಗ್ರಾಹಕರು ಬ್ಯಾಂಕ್ ಒಳಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನಮ್ಮ ಅಸಲಿ ಚಿನ್ನವನ್ನು ವಾಪಸ್ ಕೊಡಿ' ಎಂದು ಗ್ರಾಹಕರು ಪಟ್ಟು ಹಿಡಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಮಾಧಾನಪಡಿಸಲು ಪ್ರಯತ್ನಿಸಿದರು.

ಬ್ಯಾಂಕ್ ಮ್ಯಾನೇಜರ್ ಸ್ಪಷ್ಟನೆ

ಈ ಘಟನೆಗೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಪ್ರತಿಕ್ರಿಯಿಸಿದ್ದು, 'ಬ್ಯಾಂಕ್‌ನಲ್ಲಿ ಯಾವುದೇ ಮೋಸ ನಡೆಯಲು ಸಾಧ್ಯವಿಲ್ಲ. ಗ್ರಾಹಕರ ದೂರಿನ ಆಧಾರದ ಮೇಲೆ ಆಂತರಿಕ ತನಿಖೆ ನಡೆಸಲಾಗುವುದು. ಇಲ್ಲಿನ ಪ್ರತಿಯೊಂದು ವ್ಯವಹಾರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಚಿನ್ನದ ಮೌಲ್ಯಮಾಪನ ಮಾಡುತ್ತಿದ್ದ ಅಕ್ಕಸಾಲಿಗ ಅಶ್ವಿನ್ ವಿರುದ್ಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ತಪ್ಪು ನಡೆದಿದ್ದರೆ ನಿಯಮದಂತೆ ಗ್ರಾಹಕರಿಗೆ ನ್ಯಾಯ ಕೊಡಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಆದರೆ, ಬ್ಯಾಂಕ್‌ನಂತಹ ಸುರಕ್ಷಿತ ವ್ಯವಸ್ಥೆಯಲ್ಲಿ ಗ್ರಾಹಕರ ಚಿನ್ನದ ಗುಂಡುಗಳು ಮಾಯವಾಗಿದ್ದು ಹೇಗೆ? ಇದು ಬ್ಯಾಂಕ್ ಒಳಗಿನವರದ್ದೇ ಕೈವಾಡವೇ ಅಥವಾ ಮೌಲ್ಯಮಾಪಕರ ಕೃತ್ಯವೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!