
ಹಾವೇರಿ (ಡಿ.23) : ತಾಯಿ, ಮಗ ಮತ್ತು ಗರ್ಭಿಣಿ ಸೊಸೆ ಸೇರಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಭಾರತಿ ಕಮದೊಳ್ಳಿ (40), ಕಿರಣ್ (21) ಹಾಗೂ ಸೌಜನ್ಯ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮನೆಯ ಯಜಮಾನ ವಿರೂಪಾಕ್ಷಪ್ಪ ಕಮದೊಳ್ಳಿ ಬೆಳಗ್ಗೆ ಕೆಲಸಕ್ಕೆ ಹೋಗಿ ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಗಡಿ ಗ್ರಾಮದ ವಿರೂಪಾಕ್ಷಪ್ಪ ಕಮದೊಳ್ಳಿ ಅವರ ಹಿರಿಯ ಮಗ ಕಿರಣ್ ಇತ್ತೀಚೆಗಷ್ಟೇ ಸೌಜನ್ಯಳನ್ನು ವಿವಾಹವಾಗಿದ್ದ. ಸೌಜನ್ಯ ಗರ್ಭಿಣಿಯಾಗಿದ್ದಳು.
ಮತ್ತೊಬ್ಬ ಮಗ ಅರುಣ ಎಂಬಾತ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಯುವತಿ ಕಡೆಯವರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರೀತಿಸಿದ ಯುವತಿಯೊಂದಿಗೆ ಅರುಣ್ ಮನೆಬಿಟ್ಟು ಪರಾರಿಯಾಗಿದ್ದ. ಇದರಿಂದ ಯುವತಿ ಕಡೆಯವರಿಂದ ಕಿರುಕುಳ ಆರಂಭವಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ಈ ಮೂವರು ನೇಣಿಗೆ ಶರಣಾಗಿದ್ದಾರೆ ಎಂದು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಪೇದೆ ಆತ್ಮಹತ್ಯೆಗೆ ಯತ್ನ
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ಜರುಗಿದೆ. ಕೃಷ್ಣಪ್ಪ ಕರ್ತವ್ಯದ ಒತ್ತಡದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಮೊದಲು ಹೂವಿನಹಡಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಮಾನ್ವಿ: ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡಿದ್ದ ರೈತ ರವಿ ದ್ಯಾವಣ್ಣ (28) ಸಕಾಲಕ್ಕೆ ಸಾಲ ಮರು ಪಾವತಿಸಲಾಗದೆ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊರ ಗ್ರಾಮದಲ್ಲಿ ಜರುಗಿದೆ. ರೈತ ರವಿ ಕೊರ ಗ್ರಾಮದ ಸೀಮಾದಲ್ಲಿರುವ ತನ್ನ ಹೊಲದಲ್ಲಿ ಉತ್ತಮ ಬೆಳೆ ಬೆಳೆಯಲು ಮಾನ್ವಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕಳೆದ 4 ವರ್ಷಗಳ ಹಿಂದೆ ರು.6 ಲಕ್ಷ ಸಾಲ ಪಡೆದುಕೊಂಡಿದ್ದನು. ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡದೆ ಡಿ.21 ರಂದು ಬೆಳಗ್ಗೆ ಹೊಲಕ್ಕೆ ಹೋಗುವುದಾಗಿ ಹೇಳಿ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುರಿತಂತೆ ಮೃತನ ಸಹೋದರ ಶಿವಪ್ಪ ನೀಡಿದ ದೂರಿನನ್ವಯ ಮಾನ್ವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಜಯಪುರ: ಸೂಸೈಡ್ ಸ್ಪಾಟ್ ಆಗ್ತಿದೆಯಾ ವಿಶ್ವ ವಿಖ್ಯಾತ ಗೋಳಗುಮ್ಮಟ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ