Maddur Fatal Accident: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು: ಐವರ ಪ್ರಾಣ ಉಳಿಸಿದ ವಿದ್ಯುತ್ ಕಡಿತ!

Ravi Janekal   | Kannada Prabha
Published : Jun 12, 2025, 01:14 AM ISTUpdated : Jun 12, 2025, 10:18 AM IST
Maddur accident

ಸಾರಾಂಶ

ಮದ್ದೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಂದಕ್ಕೆ ನುಗ್ಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ವಿದ್ಯುತ್ ಸ್ಪರ್ಶದಿಂದ ಮೂವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಮದ್ದೂರು(ಜೂ.12): ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರಲ್ಲದೇ ಓರ್ವ ಬಾಲಕ, ಇಬ್ಬರು ಮಹಿಳೆಯರು ವಿದ್ಯುತ್ ಸ್ಪರ್ಶದಿಂದ ಆಶ್ಚರ್ಯಕರ ರೀತಿ ಪಾರಾಗಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಜರುಗಿದೆ.

ಕಾರಿನಲ್ಲಿದ್ದ ಮಂಡ್ಯ ವಿನಾಯಕ ಬಡಾವಣೆಯ ಉದಯ್ ಮತ್ತು ಮದ್ದೂರಿನ ಚನ್ನೇಗೌಡ ಬಡಾವಣೆ ಅವಿನಾಶ್ ಗಾಯಗೊಂಡಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುರಿದು ಕಂಬಕ್ಕೆ ಅಳವಡಿಸಲಾಗಿದ್ದ ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಹಠಾತ್ತನೇ ಕಡಿತಗೊಂಡಿದೆ.

ವಿದ್ಯುತ್ ತಂತಿಗಳು ಪಾದಚಾರಿಗಳಾದ ಬಾಲಕ ಶಶಿಧರ, ದೀಪಿಕಾ ಮತ್ತು ಸುಶೀಲಮ್ಮ ಅವರ ಮೇಲೆ ಬಿದ್ದು ಸಣ್ಣಪುಟ್ಟ ರೀತಿಯಲ್ಲಿ ಗಾಯಗೊಂಡು ಆಶ್ಚರ್ಯಕರ ರೀತಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಗ್ರಾಮದ ಉಮೇಶ್ ಎಂಬುವವರ ಮನೆಗೆ ನುಗ್ಗಿದ ಪರಿಣಾಮ ಮನೆ ಅಲ್ಪ ಪ್ರಮಾಣದಲ್ಲಿ ಮನೆ ಜಖಂಗೊಂಡಿದೆ.

ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಉದಯ್ ಚಾಲನೆ ಮಾಡುತ್ತಿದ್ದ ಕಾರು, ತೊರೆಶೆಟ್ಟಿಹಳ್ಳಿ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮನೆಗೆ ನುಗ್ಗಿ ಅಪಘಾತ ಸಂಭವಿಸಿದೆ. ಸ್ಥಳೀಯರು ಮತ್ತು ಹೆದ್ದಾರಿ ವಾಹನ ಸವಾರರು ಅಪಘಾತಕ್ಕೀಡಾದ ಕಾರಿನಲ್ಲಿ ಸಿಲುಕಿದ್ದ ಉದಯ್ ಮತ್ತು ಅವಿನಾಶ್ ರನ್ನು ಹೊರ ತೆಗೆದು ಆ್ಯಂಬುಲೆನ್ಸ್ ನಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಠಾಣೆ ಪಿಎಸ್ಐ ನರೇಶ್ ಹಾಗೂ ಸಿಬ್ಬಂದಿ ಅಪಘಾತಕ್ಕೀಡಾದ ಕಾರನ್ನು ರಸ್ತೆ ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚೆಸ್ಕಾಂಗೆ 1 ಲಕ್ಷ ರು. ಹಾನಿ:

ಕಾರು ಡಿಕ್ಕಿಯಾಗಿ ಮೂರು ಕಾಂಕ್ರೀಟ್ ಕಂಬಗಳು, ವಿದ್ಯುತ್ ತಂತಿ ಮತ್ತಿತರ ಉಪಕರಣಗಳು ಮುರಿದು ಬಿದ್ದು ಚೆಸ್ಕಾಂಗೆ ಸುಮಾರು 1 ಲಕ್ಷ ರು. ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ವಿದ್ಯುತ್ ಕಂಬ, ತಂತಿ ಹಾಗೂ ಹಾನಿಗೊಂಡಿರುವ ಮತ್ತಿತರ ಉಪಕರಣಗಳ ಮತ್ತು ಲೇಬರ್ ಚಾರ್ಜ್ ಮೊತ್ತವನ್ನು ಪಾವತಿ ಮಾಡುವುದಾಗಿ ಅಪಘಾತವೆಸಗಿದ ಕಾರಿನ ಮಾಲೀಕರು ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ, ಒಂದು ವೇಳೆ ನಷ್ಟದ ಮೊತ್ತವನ್ನು ಚೆಸ್ಕಾಂ ಗೆ ಪಾವತಿ ಮಾಡದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚೆಸ್ಕಾಂ ಕೆಸ್ತೂರು ವಿಭಾಗದ ಜ್ಯೂನಿಯರ್ ಇಂಜಿನಿಯರ್ ಸುಧಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!