
ಬೆಂಗಳೂರು (ಜ.25): ಆರ್ಥಿಕ ಸಂಕಷ್ಟದಿಂದ ಬೇಸತ್ತು ವ್ಯಕ್ತಿಯೊಬ್ಬರು ಮಲ್ಲೇಶ್ವರದ ಮಂತ್ರಿಮಾಲ್‌ನ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿ ಟಿ.ಸಿ. ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡವರು. ನಗರದ ಉಲ್ಲಾಳದ ಉಪ ನಗರದಲ್ಲಿ ಮಂಜುನಾಥ್ ನೆಲೆಸಿದ್ದರು. ಗುರುವಾರ ಸಂಜೆ ಮಂತ್ರಿ ಮಾಲ್‌ಗೆ ಬಂದಿರುವ ಮಂಜುನಾಥ್ ಕೆಲಹೊತ್ತು ಸುತ್ತಾಡಿ ರಾತ್ರಿ 9 ಗಂಟೆ ಸುಮಾರಿಗೆ ಎರಡನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಮೃತ ಮಂಜುನಾಥ್ ಆತಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಆದರೆ, ಬ್ಯಾಂಕ್ ಸೇರಿ ಹಲವೆಡೆ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ದಾದಾಗಿರಿ: ಮತ್ತಿಬ್ಬರು ಆತ್ಮಹತ್ಯೆ
ಯುವತಿಯ ಕಿರಿಕಿರಿಗೆ ಬೇಸತ್ತು ದೈವಪಾತ್ರಿ ಆತ್ಮಹತ್ಯೆ: ಇನ್‌ಸ್ಟಾಗ್ರಾಂನಲ್ಲಿ ಬೇರೆ ಯುವತಿಯ ಫೋಟೊಗೆ ಲೈಕ್ ಒತ್ತಿದ್ದಕ್ಕೆ ನಿಶ್ಚಿತಾರ್ಥಗೊಂಡ ಯುವತಿ ಕಿರಿಕಿರಿ ಮಾಡಿದಳು ಎಂದು ಮನನೊಂದು ದೈವಪಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಎಂಬಲ್ಲಿ ನಡೆದಿದೆ. ಚೇತನ್(25) ಆತ್ಮಹತ್ಯೆ ಮಾಡಿಕೊಂಡಿರುವ ದೈವಪಾತ್ರಿ. ಮಂಗಳೂರು ಮೂಲದ ಚೈತನ್ಯಾ ಎಂಬ ಯುವತಿ ಚೇತನ್‌ಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಾಳೆ. ಬಳಿಕ ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, 8 ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥವಾಗಿತ್ತು.
ಜ.21ರಂದು ಬೆಳಗ್ಗೆ ಚೇತನ್ ಮಾತ್ರ ಮನೆಯಲ್ಲಿದ್ದು, ಆತನ ತಾಯಿ ಪುಷ್ಪಾ ಅವರು ತವರು ಮನೆಗೆ ತೆರಳಿದ್ದರು. ಈ ವೇಳೆ ಚೈತನ್ಯಾ ಪುಷ್ಪಾರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ತಕ್ಷಣ ಮನೆಗೆ ಬನ್ನಿ ಎಂದಿದ್ದಾಳೆ. ಬಳಿಕ ಪುಷ್ಪಾ ಮನೆಗೆ ಬಂದು ನೋಡಿದಾಗ ಚೇತನ್ ಮಲಗಿದ ಸ್ಥಿತಿಯಲ್ಲಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಏಳಲಿಲ್ಲ. ಈ ವೇಳೆ ಮೇಲ್ಛಾವಣಿಯಲ್ಲಿ ಲುಂಗಿಯಿಂದ ಮಾಡಿದ ಕುಣಿಕೆ ಕಂಡು ಬಂದಿದೆ. ಈ ಬಗ್ಗೆ ಚೈತನ್ಯಾಳಲ್ಲಿ ಪ್ರಶ್ನಿಸಿದಾಗ, ಚೇತನ್ ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ನಾನು ಮನೆಗೆ ಬಂದಿದ್ದೆ. ಈ ವಿಚಾರದ ಬಗ್ಗೆ ಗಲಾಟೆ ನಡೆದಿದೆ. ಇದರಿಂದ ಬೇಸರಗೊಂಡ ಚೇತನ್ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ