
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಯುವಕನೊಬ್ಬ ಹೊಸ ಮಹೀಂದ್ರಾ ಥಾರ್ ಕಾರು ಖರೀದಿಸಿದ ಘಟನೆ ಈಗ ಚರ್ಚೆಗೆ ಕಾರಣವಾಗಿದೆ. ತನ್ನ ಕನಸಿನ ಎಸ್ಯುವಿ ಖರೀದಿಸಲು ಅಂಕಲ್ ಮನೆಯಿಂದಲೇ ಚಿನ್ನಾಭರಣ ಕದ್ದಿದ್ದಾನೆ ಎಂಬ ಆರೋಪ ಯುವಕನ ಮೇಲಿದೆ. ಅಚ್ಚರಿಯ ಸಂಗತಿ ಏನೆಂದರೆ, ಹೊಸ ಕಾರಿನ ಪೂಜೆಗೆ ಅದೇ ಅಂಕಲ್ ನನ್ನು ಯುವಕ ಆಹ್ವಾನಿಸಿದ್ದನಂತೆ.
ಮಹಾರಾಷ್ಟ್ರದ ಪನ್ಹಾಲಾ ತಾಲೂಕಿನ ಸತಾವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಸಮರ್ ಚವಾಣ್ ಎಂಬಾತ ತನ್ನ ಅಂಕಲ್ ಉಮೇಶ್ ಮಾರುತಿ ಚವಾಣ್ ಅವರ ಮನೆಯ ಸಮೀಪವೇ ವಾಸಿಸುತ್ತಿದ್ದ. ವರದಿಗಳ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆ ಉಮೇಶ್ ಅವರ ಮನೆಯಿಂದ 15 ತೊಲಾ ಚಿನ್ನಾಭರಣ, ಅಂದರೆ ಸುಮಾರು 175 ಗ್ರಾಂ ಚಿನ್ನ ಕಳುವಾಗಿತ್ತು. ಈ ಚಿನ್ನಾಭರಣಗಳನ್ನು ಸ್ಥಳೀಯ ಆಭರಣ ವ್ಯಾಪಾರಿ ಸಂಗ್ರಾಮ್ ಬಾಬಾಸೋ ಮೋರೆ ಅವರ ಸಹಾಯದಿಂದ ಸುಮಾರು 10 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಣದಲ್ಲಿ ಬಳಸಿ ಸಮರ್ ಹೊಸ ಮಹೀಂದ್ರಾ ಥಾರ್ ಖರೀದಿಸಿದ್ದಾನೆ ಎನ್ನಲಾಗಿದೆ. ಹೊಸ ಕಾರನ್ನು ಮನೆಗೆ ತಂದ ಬಳಿಕ ಸಮರ್ ಅದರ ಪೂಜೆಗೆ ತನ್ನಅಂಕಲ್ ಉಮೇಶ್ ಅವರನ್ನೂ ಆಹ್ವಾನಿಸಿದ್ದ ಎನ್ನಲಾಗಿದೆ. ಪೂಜೆಯ ಸಂದರ್ಭದಲ್ಲಿ ಧರಿಸಲು ಉಮೇಶ್ ಅವರು ತಮ್ಮ ಚಿನ್ನಾಭರಣಗಳನ್ನು ಹುಡುಕಿದಾಗ ಅವು ಕಾಣೆಯಾಗಿರುವುದು ಗೊತ್ತಾಗಿದೆ. ಆಗಲೇ ಮನೆಯಲ್ಲಿ ಚಿನ್ನ ಕಳುವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಇನ್ನೊಂದು ಸಂಗತಿಯೂ ಕುಟುಂಬದ ಅನುಮಾನವನ್ನು ಹೆಚ್ಚಿಸಿತು. ಉಮೇಶ್ ಅವರ ಅಜ್ಜಿಯ ಚಿನ್ನಾಭರಣಗಳು ಅದೇ ಸ್ಥಳದಲ್ಲಿದ್ದರೂ ಅವುಗಳನ್ನು ಮುಟ್ಟಿರಲಿಲ್ಲ ಎನ್ನಲಾಗಿದೆ. ಆದರೆ ಉಮೇಶ್ ಮತ್ತು ಅವರ ಪತ್ನಿಗೆ ಸೇರಿದ ಆಭರಣಗಳು ಮಾತ್ರ ಕಾಣೆಯಾಗಿದ್ದವು. ಹೀಗಾಗಿ ಮನೆಯ ಬಗ್ಗೆ ಚೆನ್ನಾಗಿ ತಿಳಿದಿರುವವರೇ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬದವರು ಅನುಮಾನಿಸಿದ್ದಾರೆ.
ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ಉಮೇಶ್ ಅವರು ಎರಡು ದಿನಗಳ ಹಿಂದೆ ಕೊಡೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಸಮರ್ ಏಕಾಏಕಿ ಹೊಸ ಕಾರು ಖರೀದಿಸಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಕಾರು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ವರದಿಯ ಪ್ರಕಾರ, ತನಿಖೆ ಮುಂದುವರಿದಂತೆ ಸಮರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಸಮರ್ ಚವಾಣ್ ಮತ್ತು ಆಭರಣ ವ್ಯಾಪಾರಿ ಸಂಗ್ರಾಮ್ ಬಾಬಾಸೋ ಮೋರೆ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ