
ಮುಂಬೈ : ಕಳೆದ ಜುಲೈನಲ್ಲಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಚ್ಚಿ, ಸುಮಾರು 390 ಕೋಟಿ ರು. ಮೌಲ್ಯದ 192 ಕೆ.ಜಿ. ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸರು ಇದೀಗ ಬೆಂಗಳೂರಿನ 3 ಡ್ರಗ್ಸ್ ಫ್ಯಾಕ್ಟರಿ ಮೇಲೆ ನಡೆಸಿ 56 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಕರ್ನಾಟಕ ಪೊಲೀಸರಿಗೂ ಸಿಗದ ಈ ಡ್ರಗ್ಸ್ ಫ್ಯಾಕ್ಟರಿಗಳ ಸುಳಿವು ಮಹಾರಾಷ್ಟ್ರ ಪೊಲೀಸರಿಗೆ ಸಿಕ್ಕಿದ್ದು ಇಲ್ಲಿ ಗಮನಾರ್ಹ.
ಮಹಾರಾಷ್ಟ್ರದ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಅಧಿಕಾರಿಗಳು ಡಿ.21ರಂದು ಮುಂಬೈನಲ್ಲಿ ದಾಳಿ ನಡೆಸಿ 1.5 ಕೋಟಿ ರು. ಮೌಲ್ಯದ 1.5 ಕೆಜಿ ಡ್ರಗ್ಸ್ ವಶಪಡಿಸಿಕೊಂಡು, ಅಬ್ದುಲ್ ಖಾದಿರ್ ಶೇಖ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಮೇರೆಗೆ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಸಲಾಗಿತ್ತು.
ಈತನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ಬೆಂಗಳೂರಿನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದ ಮಾಹಿತಿ ಬಹಿರಂಪಡಿಸಿದ್ದಾನೆ. ಅದರನ್ವಯ ಬೆಂಗಳೂರಿನಲ್ಲಿ ಪ್ರಶಾಂತ್ ಪಾಟೀಲ್ ನಡೆಸುತ್ತಿದ್ದ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ 4.10 ಕೆಜಿ ಘನ ಮೆಫೆಡ್ರೋನ್, 17 ಕೆಜಿ ದ್ರವ ಮೆಫೆಡ್ರೋನ್ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 55.88 ಕೋಟಿ ರುಪಾಯಿ. ದಂಧೆಯ ರೂವಾರಿ ಪ್ರಶಾಂತ್ ಪಾಟೀಲ್ ಹಾಗೂ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖನ್ ರಾಮಲಾಲ್ ಬಿಷ್ಣೋಯಿ ಎಂಬುವವರನ್ನು ಬಂಧಿಸಲಾಗಿದೆ.
ಈ ಘಟಕಗಳಲ್ಲಿ ತಯಾರಿಸಿದ ಮಾದಕ ದ್ರವ್ಯಗಳನ್ನು ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆರೋಪಿಗಳು ಈ ಆದಾಯವನ್ನು ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಖರೀದಿಗೆ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
- ಡಿ.21ರಂದು ಮುಂಬೈ ಪೊಲೀಸರಿಂದ ಬೃಹತ್ ಡ್ರಗ್ಸ್ ಜಾಲ ಪತ್ತೆ
- ಅಂದು ಅಬ್ದುಲ್ ಖಾದಿರ್ ಶೇಖ್ ಎಂಬಾತನ ಬಂಧಿಸಿದ್ದ ಪೊಲೀಸ್
- ಆತ ನೀಡಿದ ಸುಳಿವಿನ ಮೇಲೆ ಬೆಳಗಾವಿ ವ್ಯಕ್ತಿಯ ಬಂಧಿಸಲಾಗಿತ್ತು
- ಬೆಳಗಾವಿಯ ಪ್ರಶಾಂತ್ ಪಾಟೀಲ್ ಡ್ರಗ್ಸ್ ದಂಧೆ ಮಾಸ್ಟರ್ ಮೈಂಡ್
- ಬೆಂಗಳೂರಲ್ಲಿ ಡ್ರಗ್ಸ್ ಉತ್ಪಾದಿಸಿ ಅನ್ಯ ರಾಜ್ಯಗಳಿಗೆ ಸರಬರಾಜು
- ಡ್ರಗ್ಸ್‌ನಲ್ಲಿ ಸಂಪಾದಿಸಿದ ಹಣ ಬೆಂಗಳೂರು ರಿಯಲ್ ಎಸ್ಟೇಟಲ್ಲಿ ಹೂಡಿಕೆ
ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಉತ್ಪಾದನೆ, ಇಲ್ಲಿಂದ ಅನ್ಯ ರಾಜ್ಯಗಳಿಗೆ ರಫ್ತು, ಅನ್ಯ ರಾಜ್ಯಗಳಿಂದ ಇಲ್ಲಿಗೆ ರಫ್ತು, ರಾಜ್ಯದಲ್ಲಿ ಮಕ್ಕಳು, ಯುವ ಸಮೂಹದಲ್ಲಿ ಮಾದಕ ವಸ್ತು ಬಳಕೆ ಹೆಚ್ಚುತ್ತಿರುವ ಬಗ್ಗೆ ಇತ್ತೀಚೆಗೆ ‘ಕನ್ನಡಪ್ರಭ’ ಸರಣಿಯಾಗಿ ವರದಿ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚಿಸುವ ಅಭಿಯಾನ ನಡೆಸಿತ್ತು. ಈ ವಿಷಯ ಇತ್ತೀಚೆಗೆ ನಡೆದ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ 3 ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ